ಬೆಂಗಳೂರು,: ಪ್ರವಾಹ ಸಂತ್ರಸ್ತರ ಜೀವದೊಂದಿಗೆ ಚೆಲ್ಲಾಟವಾಡಿದ್ದ, ವಿಲಕ್ಷಣ ವ್ಯಕ್ತಿತ್ವದ ಪೊಲೀಸ್ ಸಬ್‌ಇನ್ಸಪೆಕ್ಟರ್ ಮಲ್ಲಣ್ಣ ಯಲಗೋಡ್ ಅವರನ್ನು ಅಮಾನತು ಮಾಡಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಮಾಡಿದ್ದಾರೆ. ಕಳೆದ ಆರು ತಿಂಗಳುಗಳಲ್ಲಿ ಮಲ್ಲಣ್ಣ ಯಲಗೋಡ್ ಅಮಾನತಾಗುತ್ತಿರುವುದು ಇದು ಎರಡನೇ ಬಾರಿ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅವರು ಪ್ರವಾಹದಿಂದ ಮುಳುಗಡೆ ಆಗಿದ್ದ ಕೂಡಲಗಿ ಗ್ರಾಮದ ಸಂತ್ರಸ್ತರ ಜೀವದೊಂದಿಗೆ ಚೆಲ್ಲಾಟವಾಡಿರುವ ಆರೋಪ ಎದುರಿಸುತ್ತಿದ್ದಾರೆ.
ಭೀಮಾ ನದಿಯ ಪ್ರವಾಹದಿಂದ ತಪ್ಪಿಸಿಕೊಂಡು ಬಂದಿದ್ದ ಗ್ರಾಮಸ್ಥರನ್ನು ಏನಾದರೂ ರಕ್ಷಣೆ ಮಾಡೋಣ ಎಂದು ಮತ್ತೆ ಕೂಡಲಗಿ ಗ್ರಾಮಕ್ಕೆ ಪಿಎಸ್‌ಐ ಮಲ್ಲಣ್ಣ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಕುರಿಮರಿಯೊಂದನ್ನು ಎತ್ತಿಕೊಂಡು ಬಂದು ರಕ್ಷಣೆ ಮಾಡಿರುವುದಾಗಿ ಕ್ಯಾಮರಾಕ್ಕೆ ಪೋಸ್ ಕೊಟ್ಟಿದ್ದರು.

ಇದರಿಂದ ಕಲಬುರಗಿ ಜಿಲ್ಲೆಯ ಇಡೀ ಪೊಲೀಸ್ ಇಲಾಖೆಗೆ ಮುಜುಗುರ ಉಂಟಾಗಿತ್ತು.
ಹಾಲಿನ ಅಭಿಷೇಕ ಮಾಡಿಸಿಕೊಂಡು ಅಮಾನತು
ವಿಪರ್ಯಾಸ ಎಂದರೆ ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅವರು ಕಳೆದ ಆರು ತಿಂಗಳುಗಳಲ್ಲಿ ಈಗ ಎರಡನೇ ಬಾರಿ ಅಮಾನತಾಗಿದ್ದಾರೆ. ಕ್ಷೀರಾಭಿಷೇಕ ಮಾಡಿಸಿಕೊಂಡು ಈ ಮೊದಲು ಅಮಾನತಾಗಿದ್ದರು. ಕಳೆದ ಜೂನ್ ತಿಂಗಳಿನಲ್ಲಿ ಕೊರೊನಾ ಲಾಕ್‌ಡೌನ್ ಜಾರಿಯಲ್ಲಿದ್ದಾಗಲೂ ತಮ್ಮ ಹುಟ್ಟುಹಬ್ಬದಂದು ಹಾಲಿನ ಅಭಿಷೇಕವನ್ನು ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅವರು ಮಾಡಿಸಿಕೊಂಡಿದ್ದರು. ಅದಕ್ಕಾಗಿ ಆಗಿನ ಕಲಬುರಗಿ ಜಿಲ್ಲಾ ಎಸ್‌ಪಿ ಯಡಾ ಮಾರ್ಟಿನ್ ಅವರು ಅಮಾನತು ಮಾಡಿ ಆದೇಶ ಮಾಡಿದ್ದರು.
ದಿ. ಮಾಜಿ ಸಿಎಂ ಧರಮ್ ಸಿಂಗ್ ಹುಟ್ಟೂರಲ್ಲಿ ಇದೆಂಥ ವಿಲಕ್ಷಣ ವರ್ತನೆಯ ಪಿಎಸ್‌ಐ?
ಇದೀಗ ಎರಡನೇ ಬಾರಿ ಅಮಾನತು
ಇದೀಗ ಎರಡನೇ ಬಾರಿ ತಮ್ಮ ವಿಲಕ್ಷಣ ವರ್ತನೆಯಿಂದ ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅಮಾತನಾಗಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್‌ಐ ಸಂಗಮೇಶ್ ಅವರಿಗೆ ನೆಲೋಗಿ ಠಾಣೆಯ ಹೆಚ್ಚುವರಿ ಪ್ರಭಾರ ಜವಾಬ್ದಾರಿಯನ್ನು ವಹಿಸಿ ಕಲಬುರಗಿ ಎಸ್‌ಪಿ ಆದೇಶ ಮಾಡಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯ ವ್ಯಾಪ್ತಿಯು ಸೂಕ್ಷ್ಮ ಪ್ರದೇಶವಾಗಿದೆ. ಹೀಗಾಗಿ ಜೇವರ್ಗಿ ಠಾಣೆಯ ಪಿಎಸ್‌ಐ ಸಂಗಮೇಶ್ ಅವರನ್ನು ಪ್ರಭಾರ ಪಿಎಸ್‌ಐ ನೇಮಕ ಮಾಡಲಾಗಿದೆ ಎಂದು ಎಸ್‌ಪಿ ಆದೇಶದಲ್ಲಿ ತಿಳಿಸಿದ್ದಾರೆ.

ಸಿಂಗಂ ರೀತಿ ವರ್ತನೆ ಮಾಡುತ್ತಿದ್ದರು
ಅಮಾತನಾಗಿರುವ ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅವರು ಸಿನಿಮಾ ದೃಶ್ಯಗಳನ್ನು ಅನುಸರಿಸುತ್ತಿದ್ದರು. ಇದು ಪೊಲೀಸ್ ಇಲಾಖೆಗೆ ಇರುಸು ಮುರುಸು ಉಂಟು ಮಾಡಿತ್ತು. ಸಿಂಗಂ, ಕೆಜಿಎಫ್ ಸಿನಿಮಾಗಳ ದೃಶ್ಯಗಳನ್ನು ಪೊಲೀಸ್ ಸಮವಸ್ತ್ರ ಧರಿಸಿ ಅನುಕರಣೆ ಮಾಡಿ ಮೊಬೈಲ್‌ನಲ್ಲು ಚಿತ್ರೀಕರಿಸಿಕೊಳ್ಳುತ್ತಿದ್ದರು. ಅದನ್ನು ಸಹಿಸಿಕೊಂಡಿದ್ದ ಪೊಲೀಸ್ ಇಲಾಖೆ, ಇದೀಗ ಪ್ರವಾಹ ಸಂತ್ರಸ್ತರೊಂದಿಗಿನ ವಿಲಕ್ಷಣ ವರ್ತನೆಗೆ ಅಮಾತನು ಮಾಡಿದೆ.
ಶಾಸಕ ಎಂ.ಪಿ. ರೇಣುಕಾಚಾರ್ಯ ಪ್ರೇರಣೆ?

ಪಿಎಸ್‌ಐ ಮಲ್ಲಣ್ಣ ಯಲಗೋಡ್ ಅವರಿಗೂ ಮೊದಲು, ಕಳೆದ ವರ್ಷ ಪ್ರವಾಹ ಸ್ಥಿತಿ ಎದುರಾಗಿದ್ದಾಗ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಇಂಥದ್ದೆ ಹುಚ್ಚಾಟವನ್ನು ಮಾಡಿದ್ದರು. ಹೊನ್ನಾಳಿ ಬಳಿಯ ಬೇಲಿ ಮಲ್ಲೂರು-ಕೋಟೆ ಮಲ್ಲೂರು ರಸ್ತೆಯಲ್ಲಿ ಹರಿಯುತ್ತಿದ್ದ ಮೊಣಕಾಲುದ್ದದ ನೀರಿನಲ್ಲಿ ತೆಪ್ಪದಲ್ಲಿ ಹತ್ತಿಕೊಂಡು ಹುಟ್ಟು ಹಾಕುವ ಮೂಲಕ ರೇಣುಕಾಚಾರ್ಯ ಅವರು ನಗೆಪಾಟಲಿಗೆ ಈಡಾಗಿದ್ದರು.