ಶನಿವಾರ ಪ್ರಕಟಣೆ ಹೊರಡಿಸಿರುವ ಭಾರತ್ ಬಯೋಟೆಕ್ ಕಂಪನಿ ತನ್ನ ಕೋವ್ಯಾಕ್ಸಿನ್ ಲಸಿಕೆಗೆ ದರ ನಿಗದಿ ಮಾಡಿದೆ. ರಾಜ್ಯ ಸರ್ಕಾರಗಳಿಗೆ ಡೋಸ್ ಒಂದಕ್ಕೆ 600 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ ಡೋಸ್ ಒಂದಕ್ಕೆ 1,200 ರೂ. ದರ ನಿಗದಿ ಮಾಡಿದೆ. ರಫ್ತು ಮಾಡುವ ಲಸಿಕೆಗೆ 15 ರಿಂದ 20 ಡಾಲರ್ ದರ ನಿಗದಿ ಮಾಡಲಾಗಿದೆ.
ದೇಶದ ಇನ್ನೊಂದು ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ದರವನ್ನು ಮೊದಲೇ ಪ್ರಕಟಿಸಿತ್ತು. ಅದು ಕೇಂದ್ರ ಸರ್ಕಾರಕ್ಕೆ 150 ರೂ., ರಾಜ್ಯ ಸರ್ಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂ. ದರ ವಿಧಿಸಿದೆ.
ಪುಣೆಯಲ್ಲಿರುವ ಏಸಿಎಂಆರ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ನಿಷ್ಕ್ರಿಯಗೊಳಿಸಿದ ಕೋವಿಡ್ ವೈರಸ್ ತಂತುಗಳನ್ನು ಬಳಸಿ ಭಾರತ್ ಬಯೋಟೆಕ್ ಲಸಿಕೆ ತಯಾರಿಸಿದೆ. ಸದ್ಯಕ್ಕೆ ಅದು ವಿಧಿಸಿರುವ ದರ ವಿಶ್ವದ ಇತರೆಲ್ಲ ಲಸಿಕೆ ದರಗಳಿಗಿಂತ ದುಬಾರಿಯಿದೆ.

“ಇಂಟ್ರಾನಾಸಲ್ ಕೋವಿಡ್‌ನಂತಹ ಇತರ ಲಸಿಕೆಗಳತ್ತ ನಾವೀನ್ಯತೆಯ ಪ್ರಯಾಣದಲ್ಲಿ ವೆಚ್ಚವನ್ನು ಮರುಪಡೆಯುವುದು ಅತ್ಯಗತ್ಯ… ಕಳೆದ 25 ವರ್ಷಗಳಿಂದ ನಮ್ಮ ಪ್ರಮುಖ ಉದ್ದೇಶವೆಂದರೆ ಜಗತ್ತಿಗೆ ಕೈಗೆಟುಕುವ, ಆದರೆ ವಿಶ್ವದರ್ಜೆಯ ಆರೋಗ್ಯ ಪರಿಹಾರಗಳನ್ನು ಒದಗಿಸುವುದು” ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಂ ಯೆಲ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ನಿಷ್ಕ್ರಿಯಗೊಂಡ ಮತ್ತು ಹೆಚ್ಚು ಶುದ್ಧೀಕರಿಸಿದ ಲಸಿಕೆಯಾಗಿದ್ದು, ಪ್ರಕ್ರಿಯೆಯ ಸಂಕೀರ್ಣತೆಯಿಂದಾಗಿ ಉತ್ಪಾದನೆಯನ್ನು ದುಬಾರಿಯನ್ನಾಗಿ ಮಾಡುತ್ತದೆ ಎಂದು ಕಂಪನಿ ಹೇಳಿದೆ. “ಉತ್ಪನ್ನ ಅಭಿವೃದ್ಧಿ, ಉತ್ಪಾದನಾ ಸೌಲಭ್ಯಗಳು ಮತ್ತು ಕ್ಲಿನಿಕಲ್ ಪ್ರಯೋಗಗಳ ಎಲ್ಲಾ ವೆಚ್ಚಗಳನ್ನು ಪ್ರಾಥಮಿಕವಾಗಿ ಭಾರತ್ ಬಯೋಟೆಕ್‌ನ ಆಂತರಿಕ ಹಣ ಮತ್ತು ಸಂಪನ್ಮೂಲಗಳನ್ನು ಬಳಸಿ ನಿಯೋಜಿಸಲಾಗಿದೆ” ಎಂದು ಕಂಪನಿ ತಿಳಿಸಿದೆ.
ಭಾರತದ ಹೊಸ ಸುತ್ತಿನ ಲಸಿಕಾ ಅಭಿಯಾನ ಮೇ 1 ರಿಂದ ಪ್ರಾರಂಭವಾಗಲಿದ್ದು, ಈ ಬಾರಿ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಬಹುದು. ಹೆಚ್ಚಿನ ಖಾಸಗಿ ಲಸಿಕಾ ಕೇಂದ್ರಗಳನ್ನು “ಮಿಷನ್ ಮೋಡ್” ನಲ್ಲಿ ನೋಂದಾಯಿಸಲು ರಾಜ್ಯಗಳು ಪ್ರಯತ್ನಿಸಬೇಕು ಎಂದು ಕೇಂದ್ರ ಹೇಳಿದೆ.