ಮಕ್ಕಳಿರಲೀ ದೊಡ್ಡವರಿರಲೀ, ಜಂತು ಹುಳುಗಳು ಸಾಮಾನ್ಯ. ಆದರೆ ಅವುಗಳ ಪರಿಹಾರಕ್ಕೆ ಔಷಧಿಯೇ ಆಗಬೇಕೆಂದೇನಿಲ್ಲ. ಮನೆಮದ್ದುಗಳೂ ತುಂಬಾ ಪರಿಣಾಮಕಾರಿ.
ಪುಟ್ಟ ಮಕ್ಕಳಿಗೆ ಜಂತು ಹುಳುಗಳು ಕಂಡು ಬಂದರೆ ಜಂತು ಹುಳುವಿನ ಔಷಧಿ ಕುಡಿಸುತ್ತೇವೆ. ಆದರೆ ಇದು ದೊಡ್ಡವರಾದ ನಮಗೆ ಕೆಲಸ ಮಾಡುವುದಿಲ್ಲ. ಕೆಲವೊಂದು ಬಾರಿ ಡಬಲ್ ಡೋಸ್ ತೆಗೆದುಕೊಂಡರೂ ಅಷ್ಟೇನೂ ಪ್ರಯೋಜನ ಆಗುವುದಿಲ್ಲ.
ತುಂಬಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಹುಳುಗಳು ಸಾಮಾನ್ಯವಾಗಿ ಕಂಡು ಬರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇವುಗಳನ್ನು ಹಾಗೆ ಬಿಟ್ಟರೆ ನಾವು ಸೇವಿಸುವ ಆಹಾರದಲ್ಲಿ ಇರುವ ಪೌಷ್ಟಿಕ ಸತ್ವಗಳನ್ನು ಈ ಹುಳುಗಳು ಸೇವನೆ ಮಾಡಿ ನಮಗೆ ಪೌಷ್ಟಿಕಾಂಶದ ಕೊರತೆ ಎದುರಾಗುವಂತೆ ಮಾಡುತ್ತವೆ.
ಒಂದು ವೇಳೆ ನಿಮಗೆ ಪೌಷ್ಟಿಕಾಂಶದ ಕೊರತೆ ಎದುರಾಗಿ ಸದಾ ಆಯಾಸ ಆಗುತ್ತಿದ್ದರೆ, ಹೊಟ್ಟೆ ಉಬ್ಬರ, ಹೊಟ್ಟೆ ನೋವು, ವಾಕರಿಕೆ, ಕೆಮ್ಮು, ವಾಂತಿ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳು ಕಾಣಿಸುತ್ತಿದ್ದರೆ, ನಿಮ್ಮ ದೇಹದಲ್ಲಿ ಅದರಲ್ಲೂ ಮುಖ್ಯವಾಗಿ ನಿಮ್ಮ ಕರುಳಿನ ಭಾಗದಲ್ಲಿ ನಿಮ್ಮ ದೇಹದ ರಕ್ತವನ್ನು ನಿಮ್ಮ ಹೊಟ್ಟೆಯಲ್ಲಿನ ಹುಳುಗಳು ಹೀರಿಕೊಳ್ಳುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಬಹುದು.
ಜಂತು ಹುಳುಗಳ ಸಮಸ್ಯೆ
ಮಕ್ಕಳಲ್ಲಿ ಅಥವಾ ನಿಮ್ಮಲ್ಲಿ ಹೆಚ್ಚಾಗಿ ಜಂತು ಹುಳುಗಳು ಕಂಡು ಬಂದರೆ ನಿಮ್ಮ ರೋಗ – ನಿರೋಧಕ ಶಕ್ತಿ ದಿನ ಕಳೆದಂತೆ ಕುಂಠಿತಗೊಳ್ಳುತ್ತದೆ. ದೇಹದ ರಕ್ತದಲ್ಲಿ ಕಬ್ಬಿಣದ ಅಂಶದ ಕೊರತೆ ಉಂಟಾಗುವುದರ ಜೊತೆಗೆ ಕರುಳಿನ ಭಾಗದಲ್ಲಿ ವಿಪರೀತ ಹಾನಿಯಾಗುತ್ತದೆ.
ಹಾಗಾಗಿ ನೀವು ಆಹಾರ ಸೇವಿಸುವ ಮುಂಚೆ ನಿಮ್ಮ ಕೈಗಳನ್ನು ಚೆನ್ನಾಗಿ ಬಿಸಿ ನೀರು ಮತ್ತು ಸೋಪಿನ ಸಹಾಯದಿಂದ ತೊಳೆದುಕೊಂಡು ನಂತರ ಆಹಾರ ಸೇವನೆ ಮಾಡಲು ಮುಂದಾಗಬೇಕು.ಇದರ ಜೊತೆಗೆ ಈ ಕೆಳಗಿನ ನಿಮ್ಮ ದೇಹಕ್ಕೆ ಸರಿ ಹೊಂದುವಂತಹ ಮನೆ ಮದ್ದುಗಳನ್ನು ಪ್ರಯತ್ನ ಮಾಡಿ ಜಂತು ಹುಳುಗಳಿಂದ ಪರಿಹಾರ ಕಂಡುಕೊಳ್ಳಬಹುದು.