ಭಾರತ ಸೇರಿದಂತೆ ಕೊರೊನಾ ರೆಡ್ ಲಿಸ್ಟ್‌ನಲ್ಲಿನ ದೇಶಗಳಿಗೆ ಭೇಟಿ ನೀಡುವ ತನ್ನ ದೇಶದ ನಾಗರಿಕರಿಗೆ ಸೌದಿ ಅರೇಬಿಯಾ ಮೂರು ವರ್ಷಗಳ ಪ್ರಯಾಣ ನಿಷೇಧ ಮತ್ತು ಭಾರಿ ದಂಡ ವಿಧಿಸಿ ಆದೇಶಿಸಿದೆ.
“ನಿಷೇಧಿತ ದೇಶಗಳಿಗೆ ಪ್ರಯಾಣಿಸುವುದು ಕೊರೊನಾ ಸಂಬಂಧಿತ ಪ್ರಯಾಣ ನಿರ್ಬಂಧಗಳು ಮತ್ತು ಸೌದಿ ಅರೇಬಿಯಾ ಹೊಸದಾಗಿ ನೀಡಿರುವ ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಸರ್ಕಾರಿ ಸಂಸ್ಥೆ ಸೌದಿ ಪ್ರೆಸ್ ಏಜೆನ್ಸಿ (ಎಸ್‌ಪಿಎ) ವರದಿಯನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಕೊರೊನಾ ರೆಡ್ ಲಿಸ್ಟ್‌ನಲ್ಲಿರುವ ರಾಷ್ಟ್ರಗಳಲ್ಲಿ ಪ್ರಸ್ತುತ ಕೊರೊನಾ ಮತ್ತು ಅದರ ರೂಪಾಂತರಿಗಳ ಸಮಸ್ಯೆ ಉಲ್ಬಣಗೊಳ್ಳುತ್ತಿರುವುದರಿಂದ ಈ ದೇಶಗಳಿಗೆ ಪ್ರಯಾಣಿಸದಂತೆ ಸೌದಿ ಆಂತರಿಕ ಸಚಿವಾಲಯದ ಅಧಿಕಾರಿಯೊಬ್ಬರು ಸೌದಿ ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಎಸ್‌ಪಿಎ ವರದಿ ತಿಳಿಸಿದೆ.
ಭಾರತ, ಯುಎಇ, ಲಿಬಿಯಾ, ಸಿರಿಯಾ, ಲೆಬನಾನ್, ಯೆಮೆನ್, ಇರಾನ್, ಟರ್ಕಿ, ಅರ್ಮೇನಿಯಾ, ಇಥಿಯೋಪಿಯಾ, ಸೊಮಾಲಿಯಾ, ಕಾಂಗೋ, ಅಫ್ಘಾನಿಸ್ತಾನ, ವೆನೆಜುವೆಲಾ, ಬೆಲಾರಸ್ ಮತ್ತು ವಿಯೆಟ್ನಾಂ ರೆಡ್ ಲಿಸ್ಟ್‌ನಲ್ಲಿರುವ ದೇಶಗಳಾಗಿವೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕೊರೊನಾ ಸಂಬಂಧಿತ ಪ್ರಯಾಣ ನಿರ್ಬಂಧವನ್ನು ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸಲಾಗುವುದು. ಸೂಚನೆಗಳನ್ನು ಉಲ್ಲಂಘಿಸಿ ಪ್ರಯಾಣಿಸಿದವರಿಗೆ ಮೂರು ವರ್ಷಗಳ ಕಾಲ ವಿದೇಶ ಪ್ರವಾಸ ನಿಷೇಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ರೆಡ್ ಲಿಸ್ಟ್‌ನಲ್ಲಿರುವ ದೇಶಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಯಾಣಿಸುವುದರ ವಿರುದ್ಧ ನಾಗರಿಕರು ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕಿರುವ ಮತ್ತು ಉಲ್ಬಣಗೊಳ್ಳುತ್ತಿರುವ ಪ್ರದೇಶಗಳಿಂದ ದೂರವಿರಬೇಕು. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಚಿವಾಲಯ ನಾಗರಿಕರಲ್ಲಿ ಮನವಿ ಮಾಡಿದೆ.