ಚಿಕ್ಕಮಗಳೂರು: ಕರೊನಾ ಮತ್ತು ಮಳೆಹಾನಿಯಿಂದ ತೊಂದರೆಗೆ ಸಿಲುಕಿದ ಜನ ಈ ಬಾರಿ ಸಂಪ್ರದಾಯಕ್ಕಷ್ಟೇ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದಾರೆ.
ಹಬ್ಬದ ಆಚರಣೆಗೆ ಗುರುವಾರ ಹೂವು, ಹಣ್ಣು, ಅಗತ್ಯ ಸಾಮಗ್ರಿ ಖರೀದಿಗೆ ಜನ ನಗರಕ್ಕೆ ಬಂದಿದ್ದರು. ಆದರೆ ಈ ಹಿಂದಿನ ಖರೀದಿ ಭರಾಟೆ ಇರಲಿಲ್ಲ. ನಗರದಲ್ಲಿ ಗ್ರಾಹಕರು ವಿರಳವಾಗಿದ್ದರು. ಶುಕ್ರವಾರ ಮನೆ ಮನೆಯಲ್ಲಿ ಗೌರಿ ಹಬ್ಬ ಆಚರಿಸಲಿದ್ದು, ಮುತೆôದೆಯರಿಗೆ ಬಾಗಿನ ನೀಡಲಿದ್ದಾರೆ.
ನಗರಸಭೆ ಬೀದಿ ಬದಿ ಹೂವು-ಹಣ್ಣು, ಮಾವಿನ ಸೊಪ್ಪು, ಬಾಳೆಕಂದು, ಗೌರಿ ಪೂಜಾ ವಸ್ತುಗಳ ಮಾರಾಟಕ್ಕೆ ತಡೆಯೊಡ್ಡಿ ಸಂತೆಗೆ ಸ್ಥಳಾಂತರಿಸಿದ್ದರಿಂದ ನಗರದಲ್ಲಿ ಹಬ್ಬದ ಕಳೆ ಇಲ್ಲದೆ ರಸ್ತೆಗಳು ಭಣಗುಡುತ್ತಿದ್ದವು.
ಯಾವುದೆ ಹಬ್ಬಹರಿದಿನಗಳು ಬಂತೆಂದರೆ ನಗರದ ಮುಖ್ಯರಸ್ತೆ ಹಾಗೂ ವೃತ್ತಗಳು ಹೂವು, ಹಣ್ಣು, ಮಾವಿನ ಸೊಪ್ಪು, ಬಾಳೆಗಿಡ, ಇತ್ಯಾದಿ ಪೂಜಾ ಸಾಮಗ್ರಿಗಳ ಅಂಗಡಿಗಳು ಗ್ರಾಹಕರಿಂದ ತುಂಬಿ ಗಿಜಿಗುಡುತ್ತಿತ್ತು. ಆದರೆ ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ನಗರಸಭೆ ಮುನ್ನೆಚ್ಚರಿಕೆ ಕ್ರಮದಿಂದ ಗೌರಿ-ಗಣೇಶ ಹಬ್ಬದ ವ್ಯಾಪಾರಕ್ಕೆ ಬೀದಿಬದಿ ವ್ಯಾಪಾರ ಮಾಡಲು ಅನುಮತಿ ನಿರಾಕರಿಸಿ ಸಂತೆಗೆ ಸ್ಥಳಾಂತರಿಸಿದೆ.
ಗುರುವಾರ ಬೆಳಗಿನಿಂದಲೇ ಕಾರ್ಯಾಚರಣೆಗೆ ಇಳಿದ ನಗರಸಭೆ ಸಿಬ್ಬಂದಿ ಎಂಜಿ ರಸ್ತೆಯಲ್ಲಿ ಹಬ್ಬದ ವ್ಯಾಪಾರಕ್ಕೆ ಮುಂದಾಗಿದ್ದ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಿದಾಗ ಗೊಣಗುತ್ತಲೇ ಸಂತೆ ಕಡೆಗೆ ಸಾಗಿದರು. ಮಧ್ಯಾಹ್ನದ ವೇಳೆಗೆ ಹನುಮಂತಪ್ಪ ವೃತ್ತದ ಸಮೀಪ ಹಾಗೂ ಇತರೆಡೆ ಮಾವಿನಸೊಪ್ಪು, ಹೂವು, ಬಾಳೆಕಂದು ಹಲವು ಪೂಜಾ ಸಾಮಗ್ರಿಗಳನ್ನು ಮಾರಲು ಕುಳಿತ ಕೆಲವೇ ನಿಮಿಷದಲ್ಲಿ ನಗರಸಭೆ ಸಿಬ್ಬಂದಿ ಪ್ರತ್ಯಕ್ಷವಾಗಿ ವ್ಯಾಪಾರಸ್ಥರನ್ನು ಸ್ಥಳಾಂತರಿಸಿದರು. ಹಬ್ಬ ಹರಿದಿನಗಳಲ್ಲೂ ವ್ಯಾಪರಕ್ಕೆ ಬಿಡದೆ ಬಡವರ ಹೊಟ್ಟೆಮೇಲೆ ಹೊಡೆದು ತೊಂದರೆ ಮಾಡುತ್ತಿದ್ದಾರೆ ಎಂದು ಕೆಲವರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಕುಟುಂಬವೊಂದು ಎಂಜಿ ರಸ್ತೆಯ ಬಸವನಗುಡಿ ಸಮೀಪ ನೂರಾರು ಗಣಪತಿ ಮೂರ್ತಿಗಳ ಮಾರಾಟಕ್ಕೆ ಮುಂದಾಗಿದ್ದು ಫುಟ್ಪಾತ್ ಮೇಲೆ ವ್ಯಾಪಾರ ಮಾಡಬಾರದೆಂದು ಸಿಬ್ಬಂದಿ ತಾಕೀತು ಮಾಡಿದ್ದರಿಂದ ಮೂರ್ತಿಗಳನ್ನು ಸ್ಥಳಾಂತರಿಸಲಾಗದೆ ಅನಿವಾರ್ಯವಾಗಿ ಮಳಿಗೆಯೊಂದನ್ನು ಬಾಡಿಗೆ ಪಡೆಯಬೇಕಾಯಿತು.
ಹಣ್ಣಿನ ವ್ಯಾಪಾರ ಚೆನ್ನಾಗಿದೆ. ಒಂದೆ ಕಡೆ ಜಾಗಕೊಟ್ಟಿರುವುದು ಒಳ್ಳೆಯದು ನಗರಸಭೆಯವರು ಸಂತೆ ಮೈದಾನದ ಸ್ವಚ್ಛತೆ ಕಾಪಾಡಿದರೆ ಉತ್ತಮ ಎಂದು ವ್ಯಾಪಾರಸ್ಥೆ ಶಶಿಕಲಾ ಹೇಳಿದರು.
ಬೆಳಗಿನಿಂದ ವ್ಯಾಪಾರ ಮಂದಗತಿಯಲ್ಲಿ ಸಾಗಿದರೂ ಸಂಜೆ ವೇಳೆಗೆ ಕೊಂಚ ಚುರುಕಾಗಿ ಕಂಡುಬಂತು. ಹಣ್ಣುಗಳು ಒಂದು ಕೆಜಿಗೆ, ಸೇಬು 100 ರೂ., ದಾಳಿಂಬೆ 100, ಮೋಸಂಬಿ 80, ಸಪೋಟ 60, ದ್ರಾಕ್ಷಿ 100, ಬಾಳೆಹಣ್ಣು 80, ಸೀತಾಫಲ 60 ರೂ.ಗಳಾಗಿದ್ದರೆ ಹೂವು ಒಂದು ಮಾರಿಗೆ ಸೇವಂತಿಗೆ 80 ರೂ., ಗುಲಾಬಿ 80, ಚೆಂಡು ಹೂ 40, ಬಾಳೆಕಂದು ಜೊತೆಗೆ 50, ಮಾವಿನ ಸೊಪ್ಪು ಕಟ್ಟಿಗೆ 20 ರೂ.ಗೆ ಮಾರಾಟ ಮಾಡಲಾಗುತ್ತಿತ್ತು.
ನಗರದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಿರುವುದರಿಂದ ಸಂತೆ ವ್ಯಾಪಾರದ ಮಾಹಿತಿ ಇಲ್ಲದೆ ಕೆಲವು ಗ್ರಾಹಕರಿಗೆ ಹಬ್ಬದ ಸಾಮಗ್ರಿಗಳನ್ನು ಕೊಳ್ಳಲು ತೊಂದರೆಯಾಯಿತು.
ಚಿಕ್ಕಮಗಳೂರಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಒಂದೇ ಸೂರಿನಡಿ ಹೂವು, ಹಣ್ಣು, ಬಾಳೆಕಂದು, ಮಾವಿನಸೊಪ್ಪು ಸೇರಿ ಗೌರಿ-ಗಣೇಶಹಬ್ಬದ ಸಾಮಗ್ರಿಗಳು ದೊರೆಯುತ್ತಿರುವುದು ಗ್ರಾಹಕರಿಗೆ ತುಂಬ ಅನುಕೂಲ. ವಾಹನ ದಟ್ಟಣೆ ನಿಯಂತ್ರಣ, ನಗರ ಸ್ವಚ್ಛತೆ ಹಾಗೂ ಸಂಚಾರಕ್ಕೂ ಯಾವುದೇ ಅಡಚಣೆ ಇಲ್ಲದಂತೆ ಸುಗಮವಾಗಿದೆ ಎನ್ನುತ್ತಾರೆ ಗ್ರಾಹಕಿ ವಿನುತಾ.
ಗೌರಿ-ಗಣೇಶ ಸೇರಿ 1000 ಮೂರ್ತಿಗಳನ್ನು ಒಂದು ವಾರದ ಮುನ್ನವೇ ಮಾರಾಟಕ್ಕೆ ತರುತ್ತಿದ್ದೆವು. ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ನಿರ್ಬಂಧ ವಿಧಿಸಿದ ಕಾರಣ ಮುನ್ನೆಚ್ಚರಿಕೆಯಿಂದ ಒಂದು ದಿನ ಮುಂಚಿತವಾಗಿ 350 ತಂದಿದ್ದೇವೆ. ಇದು ನಮ್ಮ ಕುಟುಂಬದ ಕುಲ ಕಸುಬು. ಹೇಳಿಕೊಳ್ಳುವಷ್ಟು ವ್ಯಾಪಾರವಾಗಿಲ್ಲ, ಹಾಕಿದ ಬಂಡವಾಳ ಕೈಗೆ ಸಿಕ್ಕರೆ ಸಾಕು ಎಂಬುದು ಕದ್ರಿಮಿದ್ರಿಯ ವ್ಯಾಪಾರಿ ಮಂಜುನಾಥ್ ಅವರ ಅಭಿಪ್ರಾಯ.