ಮೈಸೂರು: ಸ್ನೇಹಿತೆಯ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಆಕೆಯ ಮನೆಗೆ ಬಂದ ಯುವತಿ ಅಲ್ಲೇ ಉಂಡುತಿಂದು ಬಳಿಕ ಮಾಡಬಾರದ್ದನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಆ.23ರಂದು ಕುಂಬಾರಕೊಪ್ಪಲು ನಿವಾಸಿ ರಮೇಶ್ ಅವರ ಮಗಳ ಮದುವೆ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥದ ವೇಳೆ ಮಗಳು ಚಿನ್ನಾಭರಣ ಧರಿಸಿದ್ದಳು. ಕಾರ್ಯಕ್ರಮ ಮುಗಿದ ನಂತರ ಒಡವೆಗಳನ್ನು ಬಿಚ್ಚಿ ಅಲ್ಟ್ರಾದಲ್ಲಿ ಇಟ್ಟಿದ್ದಳು. ಅದೇ ದಿನ ಸಂಜೆ ಸಂಬಂಧಿಕರೆಲ್ಲ ಮನೆಯಿಂದ ಹೋದ ಮೇಲೆ ಒಡವೆಗಳು ಕಾಣೆಯಾಗಿದ್ದವು.
ಮನೆಯಲ್ಲಿ ಚಿನ್ನಾಭರಣ ಕಾಣೆಯಾದ ಬಗ್ಗೆ ರಮೇಶ್ ಅವರು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ವಧುವಿನ ಸ್ನೇಹಿತೆ ಅಶ್ರಿತಾ ಎಂಬಾಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಬಂಧಿತ ಆರೋಪಿ ಮೈಸೂರಿನ ಸುಭಾಷ್ ನಗರದ ಅಶ್ರಿತಾ(21), ಒಡವೆಗಳನ್ನು ಕದ್ದು ತನ್ನ ಮನೆಯಲ್ಲಿ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾಳೆ. 85 ಗ್ರಾಂ ತೂಕದ ಎರಡು ನಕ್ಲೇಸ್ ಮತ್ತು ಒಂದು ಜೊತೆ ಕಿವಿಯೋಲೆ ಸೇರಿ 4.15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಅಶ್ರಿತಾಳಿಂದ ವಶಕ್ಕೆ ಪಡೆಯಲಾಗಿದೆ.