ಲಕ್ನೋ: 13 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರ ಮಾಡಿ, ಆಕೆಯ ಕಣ್ಣು ಕಿತ್ತು ನಾಲಗೆ ಕತ್ತರಿಸಿ ವಿಕೃತವಾಗಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಲಖೀಂ ಪುರದಲ್ಲಿ ನಡೆದಿದೆ.
ಈ ಭೀಕರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಪಟ್ಟಣದ ಹೊರ ವಲಯದಲ್ಲಿರುವ ಕಬ್ಬಿನ ಗದ್ದೆಯಲ್ಲಿ ಯಾರೂ ನೋಡಲಾರದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ.
ಬಾಲಕಿ ಶುಕ್ರವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದಳು. ಪೋಷಕರು ಬಾಲಕಿಗಾಗಿ ಎಲ್ಲಡೆ ಹುಡುಕಾಟ ನಡೆಸಿದ್ದಾರೆ. ಆದರೆ ಶನಿವಾರ ಆಕೆಯ ಮೃತದೇಹ ಊರಾಚೆಗಿನ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ವಿವಸ್ತ್ರಗೊಳಿಸಿ, ಆಕೆಯನ್ನು ಆಕೆಯ ದುಪ್ಪಟದಿಂದಲೇ ಕತ್ತು ಬಿಗಿದು ಕೊಲೆಗೈಯ್ಯಲಾಗಿತ್ತು. ಅಲ್ಲದೆ ಆಕೆಯ ಕಣ್ಣು ಕಿತ್ತು ನಾಲಿಗೆ ಕತ್ತರಿಸಿ ಹಾಕಲಾಗಿತ್ತು. ಉತ್ತರ ಪ್ರದೇಶದಲ್ಲಿ ಘಟನೆ ಭಾರಿ ಸುದ್ದಿ ಮಾಡುತ್ತಿದ್ದು, ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕೆಂದು ಆಗ್ರಹ ಕೇಳಿ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.