ಬಾಗಲಕೋಟೆ : ದುರಸ್ತಿ ಕಾರ್ಯದ ಕಾರಣ ಮುಚ್ಚಲಾಗಿದ್ದ ಇಲ್ಲಿನ ಬಸವಣ್ಣನ ಐಕ್ಯ ಮಂಟಪವು ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಬರೋಬ್ಬರಿ 16 ತಿಂಗಳ ನಂತರ ಇದು ವೀಕ್ಷಣೆಗೆ ಮುಕ್ತಗೊಂಡಿದೆ.
‘₹87 ಲಕ್ಷ ವೆಚ್ಚದಲ್ಲಿ ಐಕ್ಯಮಂಟಪದ ದುರಸ್ತಿ ಕಾರ್ಯ ನಡೆದಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ’ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಎಂ.ಗಂಗಪ್ಪ ತಿಳಿಸಿದರು.
ಐಕ್ಯಮಂಟಪದಲ್ಲಿ ಬಿರುಕುಗಳು ಕಂಡು ಬಂದಿದ್ದ ಕಾರಣ ಅದರ ದುರಸ್ತಿಗಾಗಿ 2019 ಮೇ 22 ರಿಂದ ಬಸವಣ್ಣನ ಐಕ್ಯಸ್ಥಳಕ್ಕೆ ಸಾರ್ವಜನಿಕರ ಪ್ರವೇಶವನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿಷೇಧಿಸಿತ್ತು. ಆರು ತಿಂಗಳಲ್ಲಿ ಮುಗಿಯಬೇಕಿದ್ದ ದುರಸ್ತಿ ಕಾರ್ಯ ಪ್ರವಾಹ, ಕೊರೊನಾ ಸಂಕಷ್ಟದ ಕಾರಣ ವಿಳಂಬವಾಗಿತ್ತು.