ಬಾಂಬೆ ಹೈಕೋರ್ಟ್ ನ ನಾಗುರ ನ್ಯಾಯಪೀಠವು ವಾಟ್ಸ್ ಆಪ್ ಸದಸ್ಯರ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಗ್ರೂಪ್ ಅಡ್ಮಿನ್ ನನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಆದೇಶ ಪ್ರಕಟಿಸಿದೆ.
ಮಹಿಳೆಯೊಬ್ಬರ ಕುರಿತು ವಾಟ್ಸ್ ಆಪ್ ಗ್ರೂಪ್ ಒಂದರ ಸದಸ್ಯರೊಬ್ಬರು ಆಕ್ಷೇಪಾರ್ಹವಾಗಿ ಪೋಸ್ಟ್ ನ್ನು ಹಾಕಿದ್ದರು. ಇದರ ವಿರುದ್ಧ ವಾಟ್ಸ್ ಆಪ್ ಗ್ರೂಪ್ ನ ಅಡ್ಮಿನ್ ಆಗಿದ್ದ ಕಿಶೋರ್ ಟ್ಯಾರೋನ್ (33) ಎಂಬಾತನ ಮೇಲೆ ಮಹಿಳೆಯೊಬ್ಬಳು ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದಳು.
ಮಹಿಳೆಯ ಕುರಿತಾದ ಆಕ್ಷೇಪಾರ್ಹ ಪೋಸ್ಟ್ ನ್ನು ನಿರ್ವಾಹಕರು ಡಿಲೀಟ್ ಮಾಡಿಲ್ಲ ಹಾಗೂ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಕ್ಷಮೆ ಕೋರುವಂತೆ ಕೇಳಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ಆದರೆ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕಿಶೋರ್ ಟ್ಯಾರೋನ್ ಎಂಬ ವ್ಯಕ್ತಿ ಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಝಡ್ ಎ ಹಕ್ ಹಾಗೂ ಅಮಿತ್ ಬಿ ಬೋರ್ಕಾರ್ ಅವರಿದ್ದ ಪೀಠವು ಕಳೆದ ತಿಂಗಳು ವಕೀಲ ರಾಜೇಂದ್ರ ಎಂ ಡಾಂಗಾ ಅವರ ಮೂಲಕ ಕಿಶೋರ್ ಚಿಂತನಮನ್ ತರೋನ್ ಅವರು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಕ್ಕೆ ಸಂಬಂಧಪಟ್ಟಂತೆ ವಾಟ್ಸಾಪ್ ಮೆಸೇಜಿಂಗ್ ಸೇವೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ನಂತರ, ವಾಟ್ಸ್ ಆಪ್ ಗ್ರೂಪ್ ನ ಅಡ್ಮಿನ್ ಗುಂಪಿನ ಸದಸ್ಯರು ಹಾಕುವ ಪೋಸ್ಟ್ ಗಳನ್ನು ನಿಯಂತ್ರಿಸುವುದಕ್ಕೆ ಅಥವಾ ಅದನ್ನು ಪ್ರಕಟಿಸುವ ಮೊದಲೇ ಸೆನ್ಸಾರ್ ಮಾಡುವುದಕ್ಕೆ ಅಧಿಕಾರವಿಲ್ಲ ಆದರೆ ಗುಂಪಿನ ಯಾವುದೇ ಸದಸ್ಯ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾದಂತಹ ಅಂಶಗಳನ್ನು ಹಾಕಿದರೆ ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಈ ಬಗ್ಗೆ ಮೇಲ್ಮನವಿ ಆಲಿಸಿದ ನ್ಯಾಯಪೀಠ, ವಾಟ್ಸಾಪ್ ಗುಂಪಿನಲ್ಲಿ ಮಹಿಳಾ ಸದಸ್ಯೆಯ ವಿರುದ್ಧ ಕೊಳಕು ಮತ್ತು ಅಸಭ್ಯ ಭಾಷೆಯನ್ನು ಬಳಸಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳದಕ್ಕಾಗಿ ಗೊಂಡಿಯಾ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿದ ಚಾರ್ಜ್ ಶೀಟ್ ನೊಂದಿಗೆ ವಾಟ್ಸಾಪ್ ಗುಂಪಿನ ಅಡ್ಮಿನ್ ಆಗಿದ್ದ 33 ವರ್ಷದ ವ್ಯಕ್ತಿಯ ವಿರುದ್ಧ ಜುಲೈ 2016 ರಲ್ಲಿ ದಾಖಲಾದ ಎಫ್ ಐ ಆರ್ ಅನ್ನು ರದ್ದುಗೊಳಿಸಿದೆ.