ರಾಜ್ಯದ ಬೃಹತ್ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಕೆಲಸದ ಆಮಿಷ ಒಡ್ಡಿ ಯುವತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಗಳು ಕೇಳಿಬರುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದೆ ಎನ್ನಲಾಗಿರುವ ಆಡಿಯೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶ ಹುಟ್ಟು ಹಾಕಿದೆ.
ಕೆಲಸ ಕೇಳಿಕೊಂಡು ಬಂದಿರುವ ಯುವತಿಯ ಮೇಲೆ ಸಚಿವ ರಮೇಶ ಜಾರಕಿಹೊಳಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ವಿಡಿಯೊ ಮತ್ತು ಆಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ಸಚಿವ ಅಧಿಕಾರವನ್ನು ಬಳಸಿಕೊಂಡು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಕಿಡಿಕಾರಿದ್ದಾರೆ.
ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ನಾಗರೀಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷರಾದ ದಿನೇಶ ಕಲ್ಲಹಳ್ಳಿ ಅವರು ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದರಾದರೂ ಅವರ ದೂರನ್ನು ಪೊಲೀಸರು ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

ಈ ದೂರಿನ ಪತ್ರವು ಲಭ್ಯವಾಗಿದ್ದು, ದಿನೇಶ ಕಲ್ಲಹಳ್ಳಿ ಅವರು ಸಚಿವರು ಯುವತಿಗೆ ಕೆಲಸದ ಆಮೀಷ ಒಡ್ಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಲೈಂಗಿಕ ಕಿರುಕುಳ ಮಾತ್ರವಲ್ಲದೆ ಯುವತಿಗೆ ಜೀವ ಬೆದರಿಕೆಯನ್ನೂ ಹಾಕುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿಲಾಗಿದೆ. ದೂರಿನೊಂದಿಗೆ ಲೈಂಗಿಕ ಕಿರುಕುಳದ ಆಡಿಯೊ, ವಿಡಿಯೋ ಸಿಡಿಯನ್ನೂ ಲಗತ್ತಿಸಲಾಗಿದೆ ಎಂದು ಬರೆದಿದ್ದಾರೆ.
ತಮ್ಮ ವಿರುದ್ದ ಲೈಂಗಿಕ ಹಗರಣ ಬೆಳಕಿಗೆ ಬರುತ್ತಿದ್ದಂತೆ ಸಚಿವ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಪ್ರಕರಣದ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು ಸಚಿವ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
“ಕೆಲಸದ ಆಸೆಯಿಂದ ಸಚಿವರನ್ನು ಭೇಟಿ ಮಾಡಿದ ಸಂದರ್ಭ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅತ್ಯಂತ ಹೇಯ ಕೃತ್ಯ. ಬಿಜೆಪಿ ಪಕ್ಷ ಎಂದರೆ ಕಾಮಲೀಲೆ ಪಕ್ಷ ಎಂದು ಮತ್ತೊಮ್ಮೆ ಸಾಬೀತಾಗಿದೆ. ಅಧಿಕಾರದಲ್ಲಿದ್ದಾಗ ಮುಗ್ಧ ಹೆಣ್ಣುಮಕ್ಕಳ ಬಗ್ಗೆ ನಡೆಯುವ ಇಂತಹ ಕಾಮಲೀಲೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಕೂಡಲೇ ಇವನನ್ನ ಪಕ್ಷದಿಂದ ಅಮಾನತುಗೊಳಿಸಿ ಸಚಿವ ಸಂಪುಟದಿಂದ ವಜಾಗೊಳಿಸದೇ ಹೋದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುತ್ತೇವೆ” ಎಂದು ಕಾಂಗ್ರೆಸ್ ಪಕ್ಷವು ಎಚ್ಚರಿಕೆ ನೀಡಿದೆ.
ಯುವತಿಗೆ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸಿ ಲೈಂಗಿಕ ಕಿರುಕುಳ ನೀಡಿರುವ ಸಚಿವ ರಮೇಶ್ ಜಾರಕಿಹೊಳಿ ಅವರಿಂದ ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ಪಡೆಯಬೇಕು ಹಾಗೂ ಕರ್ನಾಟಕ ಭವನವನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಂಡಿರುವ ರಮೇಶ್ ಜಾರಕಿಹೊಳಿ ಅವರು ನಮ್ಮ ಕರ್ನಾಟಕದ ಘನತೆಗೆ ಕಪ್ಪು ಚುಕ್ಕೆ ಈ ಕೂಡಲೇ ಶಾಸಕ ಸ್ಥಾನದಿಂದಲೂ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಜಾ ಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಆಗ್ರಹಿಸಿದ್ದಾರೆ.
ಮಹಿಳಾ ದಿನಾಚರಣೆ ಹತ್ತಿರ ಇರುವಾಗಲೇ ಇಂತಹ ಘಟನೆ ಹೊರಬಂದಿರುವುದು ನಾಚಿಕೆಗೇಡು. ಬಿಜೆಪಿ ಸರ್ಕಾರಕ್ಕೆ ಮಹಿಳಾ ದಿನಾಚರಣೆ ನಡೆಸಲು ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದವರಿಗೆ ಸಚಿವ ಸ್ಥಾನ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ನಿಮ್ಮ ಸರ್ಕಾರದ ಮೇಲೆ ಮಹಿಳೆಯರಿಗೆ ಕಿಂಚಿತ್ತೂ ನಂಬಿಕೆ ಇಲ್ಲ. ಈ ಕೂಡಲೇ ರಮೇಶ್ ಜಾರಕಿಹೊಳಿ ಅವರಿಂದ ರಾಜೀನಾಮೆ ಪಡೆಯದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.