“ಹರಿಯಾಣ ರಾಜ್ಯದಲ್ಲಿ ಮುಖ್ಯಮಂತ್ರಿ, ಸಚಿವರು ಹೋದಲ್ಲೆಲ್ಲಾ ಪ್ರತಿಭಟನಾ ನಿರತ ರೈತರು ಕಪ್ಪು ಬಾವುಟ ಹಾರಿಸುವುದು ಮತ್ತು ಯಾವುದೇ ಸಚಿವರು ಕಾರ್ಯಕ್ರಮಕ್ಕೆ ಬರದಂತೆ ತಡೆಯಲಾಗುತ್ತಿದೆ”
ತೀವ್ರಗೊಳ್ಳುತ್ತಿರುವ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹರಿಯಾಣದಲ್ಲಿ ಕೃಷಿ ಕಾಯ್ದೆಗಳ ಪರ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಡಿ ಎಂದು ಗೃಹ ಸಚಿವ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ.
ಹರಿಯಾಣದಲ್ಲಿ, ಮುಖ್ಯಮಂತ್ರಿ ಮತ್ತು ಸಚಿವರು ಹೋದಲ್ಲೆಲ್ಲಾ ಪ್ರತಿಭಟನಾ ನಿರತ ರೈತರು ಕಪ್ಪು ಬಾವುಟ ಹಾರಿಸಿ, ಯಾವುದೇ ಸಚಿವರು ಕಾರ್ಯಕ್ರಮಕ್ಕೆ ಬರದಂತೆ ತಡೆಯುತ್ತಿದ್ದಾರೆ. ಇತ್ತೀಚೆಗೆ ಕರ್ನಾಲ್ ಸಮೀಪದ ಗ್ರಾಮವೊಂದರಲ್ಲಿ ಹರಿಯಾಣ ಮುಖ್ಯಮಂತ್ರಿ ತನ್ನ ಸಭೆಯನ್ನು ಕೂಡಾ ರದ್ದುಪಡಿಸಿದ್ದರು.
ಈ ಹಿನ್ನೆಲೆಯಲ್ಲಿ “ಮುಂದಿನ ಆದೇಶದವರೆಗೆ ಹರಿಯಾಣ ರಾಜ್ಯದಲ್ಲಿ ಕೃಷಿ ಕಾಯ್ದೆ ಪರ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಡಿ” ಎಂದು ಆದೇಶ ಹೊರಡಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
“ಕರ್ನಾಲಲ್‌ನಲ್ಲಿ ಮುಖ್ಯಮಂತ್ರಿಯವರ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿ ಅದು ಅತೀರೇಕಕ್ಕೇರಿತ್ತು. ನಂತರ ಮುಖ್ಯಮಂತ್ರಿ ತಮ್ಮ ಭೇಟಿಯನ್ನೇ ರದ್ದುಪಡಿಸಿದರು. ಈ ಕಾರಣದಿಂದಾಗಿ ಯಾವುದೇ ಕೃಷಿ ಕಾಯ್ದೆ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಡಿ ಎಂದು ಗೃಹ ಸಚಿವರು ಆದೇಶ ಹೊರಡಿಸಿದ್ದಾರೆ. ನಮಗೆ ರೈತರೊಂದಿಗಿನ ಮುಖಾಮುಖಿ ಇಷ್ಟವಿಲ್ಲ ಎಂದು ಹರಿಯಾಣದ ಶಿಕ್ಷಣ ಸಚಿವ ಕನ್ವರ್ ಪಾಲ್ ಗುಜ್ಜರ್ ಹೇಳಿದ್ದಾರೆ.
“ಕಾರ್ಯಕ್ರಮದ ಸ್ಥಳದಲ್ಲಿ ರೈತರು ಹೇಗೆ ವರ್ತಿಸಿದ್ದಾರೆ ಎಂಬುದನ್ನು ನಾವು ಹೇಳಬೇಕಾಗಿಲ್ಲ. ಕುರ್ಚಿಗಳನ್ನು ಎಸೆದು ವೇದಿಕೆಯನ್ನು ಹಾಳುಗೆಡವಿ, ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಕೂಡಾ ಅನುಮತಿಸಿಲ್ಲ” ಎಂದು ಆರೋಪಿಸಿದರು.
ಹರಿಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಜನವರಿ 10 ರಂದು ಕರ್ನಾಲ್ ಬಳಿಯ ಕೈಮ್ಲಾ ಎಂಬ ಗ್ರಾಮಕ್ಕೆ ಭೇಟಿ ನೀಡಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳ ಉಪಯೋಗಗಳ ಬಗ್ಗೆ ಭಾಷಣ ಮಾಡಬೇಕಿತ್ತು. ಮಹಾಪಂಚಾಯತ್ ಎಂಬ ಹೆಸರಿನ ಆ ಕಾರ್ಯಕ್ರಮದಲ್ಲಿ ರೈತರ ಜೊತೆ ಸಂವಾದ ನಡೆಸಬೇಕಿತ್ತು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ವೇದಿಕೆಗೆ ನುಗ್ಗಿದ ಕಾಯ್ದೆ ವಿರೋಧಿ ರೈತರು ಕೃಷಿ ಕಾಯ್ದೆಗಳ ವಿರುದ್ಧ, ಕೇಂದ್ರ ಸರ್ಕಾರ, ಬಿಜೆಪಿ ವಿರುದ್ಧ ಘೋಷಣೆ ಕೂಗಿ ಗದ್ದಲವೆಬ್ಬಿಸಿದ್ದಾರೆ. ಕುರ್ಚಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಇದರಿಂದ ಸಿಎಂ ಕಾರ್ಯಕ್ರಮವನ್ನೆ ರದ್ದುಗೊಳಿಸಿ ಮುಖಭಂಗಕ್ಕೊಳಾಗಾಗಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ರೈತರ ವಿರುದ್ಧವಿದ್ದು, ಕಾರ್ಪೊರೇಟ್‌ಗಳ ಹಿತಾಸಕ್ತಿ ಕಾಪಾಡುತ್ತವೆ ಎಂದು ರೈತರು ಆರೋಪಿಸಿದ್ದಾರೆ. ಅದರಲ್ಲಿಯೂ ಪಂಜಾಬ್ ಮತ್ತು ಹರಿಯಾಣ ರೈತರು ಅತಿ ಹೆಚ್ಚು ಗೋಧಿ ಮತ್ತು ಭತ್ತ ಬೆಳೆಯುತ್ತಿದ್ದು ಎಂಎಸ್‌ಪಿಯನ್ನೇ ನಂಬಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಈ ಕಾಯ್ದೆಗಳಲ್ಲಿ ಎಂಎಸ್‌ಪಿ ಬಗ್ಗೆ ಚಕಾರವಿಲ್ಲ. ಹಾಗಾಗಿ ಅಲ್ಲಿನ ರೈತರ ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಅಣಿಯಾಗಿದ್ದಾರೆ.
ಆದರೆ ಕೇಂದ್ರ ಕೃಷಿ ಕಾಯ್ದೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು ದೇಶಾದ್ಯಂತ 700 ಕಾರ್ಯಕ್ರಮಗಳ ಮೂಲಕ ಅವುಗಳ ಉಪಯೋಗಗಳನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಹೊರಟಿದೆ. ಅದರ ಭಾಗವಾಗಿಯೇ ಹರಿಯಾಣದಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ರೈತರ ಹೋರಾಟಕ್ಕೆ ಬೆದರಿ ಅದನ್ನು ರದ್ದುಗೊಳಿಸಲಾಗಿದೆ.