ಬೆಂಗಳೂರು, ಆಗಸ್ಟ್ 27: ಬೆಂಗಳೂರು ನಗರದ 70 ವರ್ಷದ ವ್ಯಕ್ತಿ ಬರೆದ ಪತ್ರವನ್ನು ಪರಿಶೀಲನೆ ನಡೆಸಿದ ಕರ್ನಾಟಕ ಹೈಕೋರ್ಟ್ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಅಳಿಯ ಸಾವನ್ನಪ್ಪಿದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರಿಗೆ ಬೆಂಗಳೂರಿನ ಕೋಮಲನಗರದ ನಿವಾಸಿಯೊಬ್ಬರು ಪತ್ರ ಬರೆದಿದ್ದರು. ‘ಪತ್ರದಲ್ಲಿ ಹೇಳಿರುವ ಅಂಶಗಳು ಸರಿಯಾಗಿದ್ದರೆ ಅದು ಅಘಾತಕಾರಿ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ” ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಚೇತನ್ ಕುಮಾರ್ ಎಂಬುವವರಿಗೆ ಕೋವಿಡ್ ಹೊರತಾದ ಕಾಯಿಲೆಗೆ ಚಿಕಿತ್ಸೆ ಕೊಡಿಸಲು 15 ರಿಂದ 20 ಆಸ್ಪತ್ರೆಗಳನ್ನು ಸಂಪರ್ಕಿಸಲಾಗಿದೆ. ಎರಡು ದಿನ ಪ್ರಯತ್ನ ಪಟ್ಟರೂ ಎಲ್ಲಿಯೂ ಚಿಕಿತ್ಸೆ ಸಿಗದ ಕಾರಣ ಜುಲೈ 2ರಂದು ಅವರು ಮೃತಪಟ್ಟಿದ್ದಾರೆ.
ಕೋವಿಡ್ ಪರೀಕ್ಷೆ ವರದಿ ಇಲ್ಲದೇ ಸೇರಿಸಿಕೊಳ್ಳುವುದಿಲ್ಲ, ಪಿಪಿಇ ಕಿಟ್ ಇಲ್ಲ ಮುಂತಾದ ನೆಪಗಳನ್ನು ಹೇಳಿದ ಆಸ್ಪತ್ರೆಗಳು ಚಿಕಿತ್ಸೆ ಕೊಡಲು ನಿರಾಕರಿಸಿದವು. ಕೆ. ಸಿ. ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಸಹ ಮಾಡಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಗಂಟಲು ದ್ರವ ನೀಡಿಕೆ : 5,100 ರೂ. ನೀಡಿ ರಾಜಾಜಿನಗರದ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಗಂಟಲು ದ್ರವ ನೀಡಲಾಯಿತು. ನೆಲಮಂಗಳಲದ ಆಸ್ಪತ್ರೆಯಲ್ಲಿ ಐಸಿಯು ಲಭ್ಯವಿದೆ ಎಂದು ಅಲ್ಲಿಗೆ ಕರೆದುಕೊಂಡು ಹೋಗಲಾಯಿತು.
ಆದರೆ ಅಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಲಭ್ಯವಿಲ್ಲದ ಕಾರಣ ಮತ್ತೆ ಆಸ್ಪತ್ರೆ ಹುಡುಕಿಕೊಂಡು ಹೋಗಲಾಯಿತು. ಸಿಕ್ಕಿದ ಆಸ್ಪತ್ರೆಗೆ ದಾಖಲು ಮಾಡಿದ ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟರು. ಅವರ ಕೋವಿಡ್ ವರದಿ ಸಹ ನೆಗೆಟಿವ್ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಪತ್ರದ ಆಧಾರದ ಮೇಲೆ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದ್ದಾರೆ. ತನಿಖೆಗೆ ಬಳಿಕ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.