ನವದೆಹಲಿ: ಪೂರ್ವ ಲಡಾಖ್ನಲ್ಲಿ ಭಾರತ ಹಾಗೂ ಚೀನಾ ಸೇನೆ ನಡುವೆ ನಡೆದ ಘರ್ಷಣೆ ಬಳಿಕ ಚೀನಾ ವಿರುದ್ಧ ಹಲವು ಆರ್ಥಿಕ ಕ್ರಮಗಳನ್ನು ಕೈಗೊಂಡಿರುವ ಭಾರತ ಈಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ವಿದೇಶದಿಂದ ಆಮದಾಗುವ ಎಲ್ಇಡಿ ಉತ್ಪನ್ನಗಳನ್ನು ರ್ಯಾಂಡಮ್ ಪರೀಕ್ಷೆಗೆ ಒಳಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಉತ್ತಮ ಗುಣಮಟ್ಟದ ಇಎಲ್ಡಿ ಸರಕನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗುತ್ತದೆ. ಕಳಪೆ ಉತ್ಪನ್ನಗಳನ್ನು ಆಯಾ ದೇಶಗಳಿಗೆ ವಾಪಸ್ ಕಳಿಸಲಾಗುತ್ತದೆ. ಈ ಕ್ರಮದಿಂದ ಚೀನಾಕ್ಕೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ವಿದೇಶಿ ವ್ಯವಹಾರಗಳ ನಿರ್ದೇಶನಾಲಯ ಶುಕ್ರವಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ದೇಶಕ್ಕೆ ಆಮದಾಗುವ ಎಲ್ಇಡಿ ಉತ್ಪನ್ನಗಳನ್ನು ರ್ಯಾಂಡಮ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಭಾರತೀಯ ಗುಣಮಟ್ಟ ಪ್ರಾಧಿಕಾರದ ಪ್ರಯೋಗಾಲಯಕ್ಕೆ ಇವುಗಳನ್ನು ಕಳಿಸಲಾಗುತ್ತದೆ. 7 ದಿನದ ಒಳಗಾಗಿ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ಉತ್ತೀರ್ಣ ಆಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ.
ಚೀನಾಕ್ಕೆ ಹೊಡೆತ: ಎಲೆಕ್ಟ್ರಾನಿಕ್ಸ್, ಎಲ್ಇಡಿ, ಮೊಬೈಲ್ ಇನ್ನಿತರ ಉತ್ಪನ್ನಗಳು ಭಾರತಕ್ಕೆ ಚೀನಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಮದಾಗು ತ್ತವೆ. ಆದರೆ ಇವುಗಳಲ್ಲಿ ಬಹುತೇಕ ಉತ್ಪನ್ನಗಳ ಮುಣಮಟ್ಟ ಸಾಧಾರಣ ವಾಗಿರುತ್ತದೆ. ಹೀಗಾಗಿ ಚೀನಾಕ್ಕೆ ಹೊಡೆತ ಬೀಳುವುದು ನಿಶ್ಚಿತವಾಗಿದೆ.
ಸಮಿತಿ ರಚನೆ
ಈ ಯೋಜನೆಯನ್ನು ಜಾರಿಗೆ ತರಲು ರಾಸಾಯನಿಕ ಸಚಿವಾಲಯ ಸಮಿತಿಯೊಂದನ್ನು ರಚನೆ ಮಾಡಿದೆ. ಈ ಸಮಿತಿ ಅಧ್ಯಯನ ನಡೆಸಿ, ಪ್ರಾಸ್ತಾವನೆ ಸಿದ್ಧಪಡಿಸಲಿದೆ. ಮೊದಲು ಈ ಪ್ರಸ್ತಾವನೆಯನ್ನು ವೆಚ್ಚ ಇಲಾಖೆಗೆ ಕಳಿಸಲಾಗುತ್ತದೆ. ಬಳಿಕ ಸಂಪುಟದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಮೆರಿಕದಲ್ಲಿ ಟಿಕ್ಟಾಕ್ ವಿ-ಚಾಟ್ ಆಪ್ ಬ್ಯಾನ್
ಚೀನಾ ಮೂಲದ ಆಪ್ಗಳಾದ ಟಿಕ್ಟಾಕ್ ಹಾಗೂ ವಿ-ಚಾಟ್ ಮೇಲೆ ಅಮೆರಿಕ ಸರ್ಕಾರ ನಿರ್ಬಂಧ ಹೇರಿದೆ. ಭಾನುವಾರದಿಂದ ನಿರ್ಬಂಧ ಜಾರಿಗೆ ಬರಲಿದೆ ಎಂದು ಅಲ್ಲಿನ ವಾಣಿಜ್ಯ ಸಚಿವಾಲಯ ತಿಳಿಸಿದೆ. ಅಮೆರಿಕದ ಕೋಟ್ಯಂತರ ಜನರ ಡೇಟಾವನ್ನು ಈ ಆಪ್ಗಳು ಸಂಗ್ರಹಿಸುತ್ತಿವೆ ಎಂಬ ಕಾರಣಕ್ಕೆ ನಿಷೇಧಿಸಲಾಗಿದೆ.
ರಾಸಾಯನಿಕದಲ್ಲಿ ಸ್ವಾವಲಂಬನೆ
ರಾಸಾಯನಿಕ ಆಮದು ವಿಚಾರದಲ್ಲಿ ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ 25 ಸಾವಿರ ಕೋಟಿ ರೂ. ಮೊತ್ತದ ಹೊಸ ಯೋಜನೆ ಸಿದ್ಧತೆ ನಡೆಸುತ್ತಿದೆ. ಔಷಧ, ಕೀಟನಾಶಕ, ಕೈಗಾರಿಕೆಗಳಿಗೆ ಅಗತ್ಯವಿರುವ ರಾಸಾಯನಿಕಗಳನ್ನು ಭಾರತದಲ್ಲಿ ಉತ್ಪಾದನೆ ಮಾಡುವ ಕಂಪನಿಗಳಿಗೆ ಪ್ರೋತ್ಸಾಹಧನ ನೀಡಲು ಮುಂದಾಗಿದೆ. ಆತ್ಮನಿರ್ಭರ ಯೋಜನೆ ಅಡಿ ಇದರಿಂದ ಸ್ಥಳೀಯ ಉದ್ಯಮಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ರಾಸಾಯನಿಕ ಸಚಿವಾಲಯ 75 ವಿಧದ ರಾಸಾಯನಿಕಗಳ ಪಟ್ಟಿ ಸಿದ್ಧಪಡಿಸಿದೆ. ಇವುಗಳ ಉತ್ಪಾದಕರಿಗೆ ಮೂಲ ಬೆಲೆಯ ಶೇ. 10ನ್ನು ಪ್ರೋತ್ಸಾಹಧನ ರೂಪದಲ್ಲಿ ನೀಡುವ ಬಗ್ಗೆ ಚರ್ಚೆ ನಡೆದಿದೆ. ಮುಂದಿನ 5 ವರ್ಷದವರೆಗೆ ಈ ಯೋಜನೆ ಜಾರಿಯಲ್ಲಿ ಇರಲಿದೆ. ಭಾರತ ಪ್ರತಿವರ್ಷ ಸುಮಾರು 1.50 ಲಕ್ಷ ಕೋಟಿ ರೂ. ಮೊತ್ತದ ರಾಸಾಯನಕಗಳನ್ನು ಆಮದು ಮಾಡಿಕೊಳ್ಳುತ್ತದೆ.
ಇನ್ಸ್ಟಾಗ್ರಾಂ ಬಳಕೆದಾರರ ಮೇಲೆ ಫೇಸ್ಬುಕ್ ಬೇಹು
ಫೇಸ್ಬುಕ್ ತನ್ನ ಅಂಗ ಸಂಸ್ಥೆಯಾದ ಇನ್ಸ್ಟಾಗ್ರಾಂನ ಬಳಕೆದಾರರ ಬೇಹುಗಾರಿಕೆ ಮಾಡುತ್ತಿದೆ ಎನ್ನುವ ದೂರು ಕೇಳಿ ಬಂದಿದೆ. ಮೊಬೈಲ್ ಕ್ಯಾಮೆರಾಗಳನ್ನು ಬಳಸಿಕೊಂಡು ನಿಗಾ ಇಡಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಇನ್ಸ್ಟಾಗ್ರಾಂ ಬಳಸದೆ ಇರುವ ಸಮಯದಲ್ಲೂ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದ್ದು, ಬಳಕೆದಾರರ ದೈನಂದಿನ ಕೆಲಸಗಳ ಮೇಲೆ ಕಣ್ಣಿಡಲಾಗುತ್ತಿದೆ. ಅವರ ಖಾಸಗಿ ಕ್ಷಣಗಳ ಮೇಲೂ ಕಣ್ಣಿರಿಸಿದೆ ಎಂದು ದೂರಲಾಗಿದೆ. ಈ ಕುರಿತಾಗಿ ಸ್ಯಾನ್ಫ್ರಾನ್ಸಿಸ್ಕೋದ ಫೆಡರಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಆದರೆ ಫೇಸ್ಬುಕ್ ಈ ಆರೋಪವನ್ನು ಸಂಪೂರ್ಣ ವಾಗಿ ತಳ್ಳಿ ಹಾಕಿದೆ. ಕೆಲ ಸಣ್ಣಪುಟ್ಟ ತಾಂತ್ರಿಕ ದೋಷ ಉಂಟಾಗಿರುವ ಸಾಧ್ಯತೆಯಿದ್ದು ಅದನ್ನು ಸರಿಪಡಿಸುವುದಾಗಿ ತಿಳಿಸಿದೆ.