ಅಮೀನಗಡ: ಗೌರಿ ಹುಣ್ಣಿಮೆ ಬಂತೆಂದರೆ ಸಾಕು ಉತ್ತರ ಕರ್ನಾಟಕದ ನಗರದ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹೆಂಗಳೆಯರಲ್ಲಿ ಸಡಗರ- ಸಂಭ್ರಮ ಮನೆ ಮಾಡಿದೆ.
ಸಕ್ಕರೆ ಗೊಂಬೆ ತಯಾರಿಕೆ ಒಂದು ಕಲೆ.

ಶುದ್ಧ ಸಕ್ಕರೆಗೆ ತಕ್ಕಂತೆ ನೀರು, ನಿಂಬೆರಸ, ಹಾಲು, ಏಲಕ್ಕಿ ಹಾಕಿ ಒಲೆಯ ಮೇಲೆ ಹದ ಬರುವ ಹಾಗೆ ಕಾಯಿಸಲಾಗುತ್ತದೆ. ಆ ಬಳಿಕ ಹದವನ್ನು ಗೊಂಬೆ ತಯಾರಿಕೆಯ ಕಟ್ಟಿಗೆ ಅಚ್ಚುಗಳಿಗೆ ಹಾಕಿದಾಗ ಕೆಲವೇ ಸಮಯದಲ್ಲಿ ಬಗೆಬಗೆಯ ಗೊಂಬೆಗಳು ಸಿದ್ಧವಾಗುತ್ತವೆ.
ಗೌರಿ ಹುಣ್ಣಿಮೆ ಬಂತೆಂದರೆ ಉತ್ತರ ಕರ್ನಾಟಕದಲ್ಲಿ ಹೆಣ್ಣು ಮಕ್ಕಳಿಗೆ ಸಡಗರವೊ ಸಡಗರ, ಸೀಗಿ ಹುಣ್ಣಿಮೆಯಂದು ಸಣ್ಣ ಗೌರಿ ಹಬ್ಬ, ಗೌರಿ ಹುಣ್ಣಿಮೆಗೆ ದೊಡ್ಡಗೌರಿ ಹಬ್ಬವೆಂದು ಎರಡು ಬಾರಿ ಆಚರಿಸುವುದು ಇಲ್ಲಿಯ ವಾಡಿಕೆ, ಸಕ್ಕರೆ ಅರತಿ ಈ ಹಬ್ಬದ ವಿಶೇಷ. ಹೆಣ್ಣು ಮಕ್ಕಳು ಸಕ್ಕರೆ ಆರತಿ ತಟ್ಟೆಯಲ್ಲಿಟ್ಟುಕೊಂಡು ಗೌರಿಗೆ ಬೆಳಗುತ್ತಾರೆ. ಹೊಸದಾಗಿ ಮದುವೆ ನಿಶ್ಚಯಗೊಂಡ ವರನ ಕಡೆಯವರು ವಧುವಿನ ಮನೆಗೆ ಗೌರಿ ಹುಣ್ಣಿಮೆಯಂದು ದಂಡಿಯ ಜೊತೆಗೆ ಸಕ್ಕರೆ ಗೊಂಬೆಗಳನ್ನು ತೆಗೆದುಕೊಂಡು ಬರುವ ಸಂಪ್ರದಾಯವಿದೆ.

ವಿವಿಧ ರೀತಿಯ ಅಚ್ಚುಗಳಿಂದ ನವಿಲು, ಆನೆ, ಗೋಪುರ, ಒಂಟೆ, ರಥ, ಬಸವ, ಶಿವ ಪಾರ್ವತಿ, ಕೃಷ್ಣ ಹೀಗೆ ವೈವಿಧ್ಯಮಯ ಆಕಾರಗಳ ಬಣ್ಣ ಬಣ್ಣದ ಬೊಂಬೆಗಳನ್ನು ತಯಾರಿಸುತ್ತೇವೆ ಎನ್ನುತ್ತಾರೆ, ನಾಗಪ್ಪ ವಂದಾಲ, ಅಶೋಕ ಮಾಗಿ ಮತ್ತು ಸಾವಳಗೆಪ್ಪ ವಂದಾಲ.
ಹಬ್ಬವು ಒಂದು ತಿಂಗಳಿದೇ ಎನ್ನುವಾಗಲೇ ಈ ಆರತಿಗಳ ತಯಾರಿಸಲು ಪ್ರಾರಂಬಿಸುತ್ತೇವೆ ಪ್ರತಿ ತಯಾರಕರು ಸುಮಾರು 8 ರಿಂದ 5 ಕ್ವಿಂಟಾಲ್ ಸಕ್ಕರೆಯಿಂದ ಆರತಿ ತಯಾರಿಸುತ್ತೇವೆ. ಒಂದು ಕ್ವಿಂಟಾಲ್ ಸಕ್ಕರೆ 80ಕೆಜಿ ಸಕ್ಕರೆ ಬೊಂಬೆಗಳಾಗುತ್ತಿದ್ದು, ರೂ.120 ರಿಂದ 100ಕ್ಕೆ ಒಂದು ಕೆ.ಜಿ. ಸಕ್ಕರೆ ಆರತಿ ಮಾರುತ್ತೇವೆ. ಸಕ್ಕರೆ ಬೆಲೆ ಹೆಚ್ಚಾಗಿರುವುದರಿಂದ ಕಾರ್ಮಿಕರ ಅಭಾವದಿಂದ ಸಕ್ಕರೆ ಆರತಿಗಳ ಬೆಲೆ ಹೆಚ್ಚಾಗಿದೆ’ ಎನ್ನುತ್ತಾರೆ ತಯಾರಕರಾದ ನಾಗಪ್ಪ ವಂದಾಲ, ಅಶೋಕ ಮಾಗಿ, ಮತ್ತು ಸಾವಳಗೆಪ್ಪ ವಂದಾಲ.

ಗೌರಿ ಹುಣ್ಣಿಮೆಯ ನಂತರ ಐದನೇ ದಿನದ ವಿಶೇಷವೇನೆಂದರೆ ರೊಟ್ಟಿ, ಪುಡಿ ಚಟ್ನಿ, ಬುತ್ತಿ ಹಾಗೂ ಸಿಹಿ ತಿನಿಸುಗಳನ್ನು ತಯಾರಿಸಿ ಬೆಳದಿಂಗಳಿನಲ್ಲಿ ಮನೆಯ ಮಾಳಿಗೆಗಳ ಮೇಲೆ ಸಹಭೋಜನ ಮಾಡುವುದಕ್ಕೆ ‘ಕುಂತಿ ರೊಟ್ಟಿ ಹಬ್ಬ’ ಎಂದು ಕರೆಯುವ ಪ್ರತೀತಿ ಇದೆ. ಇದರೊಂದಿಗೆ ಹಬ್ಬದ ಆಚರಣೆ ಸಂಪನ್ನವಾಗುತ್ತದೆ.
ಇಂದಿನ ದಿನಮಾನದಲ್ಲಿ ಗ್ರಾಮೀಣ ಪ್ರದೇಶದ ಇಂತಹ ಹಬ್ಬ ಆಚರಣೆ ಕ್ರಮೇಣ ಕಣ್ಮರೆಯಾಗುತ್ತಿವೆ. ಆಧುನಿಕತೆಗೆ ಮಾರುಹೋಗಿರುವ ಇಂದಿನ ಜನಾಂಗ ಇಂತಹ ಸಾಂಪ್ರದಾಯಿಕ ಆಚರಸುವುದರ ಮೂಲಕ ಮುಂದಿನ ಪೀಳಿಗೆಗೆ ಇಂತಹ ಹಬ್ಬ ಪರಿಚಯಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕಾಗಿದೆ. ವರದಿ : ಮುಸ್ತಾಫಾ ಮಾಸಾಪತಿ