ಹರಿದ್ವಾರ: ಕೊರೋನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಕುಂಭ ಮೇಳವನ್ನು ಅವಧಿಗೆ ಮೊದಲೇ ಪೂರ್ಣಗೊಳಿಸಬೇಕೆಂಬ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ.
ಕೊರೋನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆ ಕುಂಭ ಮೇಳವನ್ನು ಅವಧಿಗೂ ಮುನ್ನವೇ ಪೂರ್ಣಗೊಳಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ಮುಖಂಡರ ಜತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹರಿದ್ವಾರದ ಜಿಲ್ಲಾಧಿಕಾರಿ ದೀಪಕ್ ರಾವತ್ ಹೇಳಿದ್ದಾರೆ. ಕುಂಭಮೇಳವನ್ನು ಅವಧಿಗೆ ಮೊದಲೇ ಪೂರ್ಣಗೊಳಿಸಲು ಸರಕಾರ, ವಿವಿಧ ಅಖಾಡಗಳ ಜತೆ ಮಾತುಕತೆ ನಡೆಸಿದೆ ಎಂಬ ವರದಿಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಇದಕ್ಕೂ ಮೊದಲು ಕುಂಭಮೇಳದ ಮೊದಲ ಘಟ್ಟ ಮಂಗಳವಾರ ಅಂತ್ಯಗೊಂಡಿದೆ. ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. ನಿಗದಿಯಂತೆ ಏಪ್ರಿಲ್ 30ರವರೆಗೆ ಮೇಳ ಮುಂದುವರಿಯಲಿದೆ. ಈ ಮಧ್ಯೆ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅವರು, ಜನರ ಆರೋಗ್ಯ ಮುಖ್ಯ. ಆದರೆ ಅವರ ಧಾರ್ಮಿಕ ನಂಬಿಕೆಗಳನ್ನು ಕಡೆಗಣಿಸಬಾರದು. ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಕುಂಭಮೇಳ ನಡೆಯುತ್ತಿದೆ. ಎಂದು ಹೇಳಿದ್ದಾರೆ.
ಕುಂಭ ಮೇಳ ಮತ್ತು ನಿಜಾಮುದ್ದೀನ್ ಮರ್ಕಝ್ ನಡುವೆ ಹೋಲಿಕೆ ಸರಿಯಲ್ಲ ಎಂದಿರುವ ತೀರಥ್ ಸಿಂಗ್ ರಾವತ್, ಮರ್ಕಝ್ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದಿತ್ತು ಕುಂಭ ಮೇಳ ಹೊರಗಡೆ ಗಂಗಾ ನದಿಯ ಘಾಟ್‌ಗಳಲ್ಲಿ ನಡೆಯುತ್ತಿದೆ ಎಂದಿದ್ದಾರೆ. ಲಕ್ಷಾಂತರ ಜನರು ಕುಂಭ ಮೇಳಕ್ಕೆ ಬರುತ್ತಿರುವುದರಿಂದ ಕೊರೋನಾ ಎರಡನೇ ಅಲೆಯನ್ನು ಮತ್ತಷ್ಟು ಸಮರ್ಥಗೊಳಿಸಿದಂತೆ ಆಗುವುದಿಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ರಾವತ್, ಕುಂಭ ಮೇಳದಲ್ಲಿ ಹೊರಗಿನವರು ಭಾಗಿಯಾಗುತ್ತಿಲ್ಲ ಎಲ್ಲರೂ ನಮ್ಮ ಜನರೇ, ಕುಂಭ ಮೇಳ 12 ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ ಹಾಗೂ ಕುಂಭ ಮೇಳ ನಡೆಯುತ್ತಿರುವ ಹರಿಯುವ ನೀರಿನ ದಡದಲ್ಲಿ ಹರಿಯುವ ನೀರಿನಲ್ಲಿ ಗಂಗಾ ಮಾತೆಯ ಆಶೀರ್ವಾದವಿರುತ್ತದೆ, ಅಲ್ಲಿ ಕೊರೋನಾ ಇರಬಾರದು ಎಂದು ಸಿಎಂ ತೀರ್ಥ್ ಸಿಂಗ್ ರಾವತ್ ಹೇಳಿದ್ದಾರೆ.