ಯುವ ಕ್ರಿಕೆಟಿಗ ವಿಜಯ್ ಶಂಕರ್ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ವಿಜಯ್ ಶಂಕರ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಘೋಷಿಸಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದಲ್ಲಿ ಆಲ್‌ರೌಂಡರ್ ಆಗಿ ಹಲವು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿಜಯ್ ಶಂಕರ್ ಈ ಬಾರಿಯ ಐಪಿಎಲ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಸನ್ ರೈಸರ್ಸ್ ತಂಡದ ಪರವಾಗಿ ವಿಜಯ್ ಶಂಕರ್ ಕಣಕ್ಕಿಳಿಯಲಿದ್ದು ದುಬೈಗೆ ಹಾರಲು ಸಜ್ಜಾಗಿದ್ದಾರೆ.
ಶಂಕರ್ ತನ್ನ ಪ್ರೇಯಸಿ ವೈಶಾಲಿ ವಿಶ್ವೆಶ್ವರನ್ ಅವರೊಂದಿಗೆ ನಿಶ್ಚಿತಾರ್ಥದ ಸಮದರ್ಬದ 2 ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಸಾಕಷ್ಟು ಶುಭಾಶಯಗಳು ಹರಿದುಬರುತ್ತಿದ್ದು ಭಾರತೀಯ ಕ್ರಿಕೆಟ್ ತಂಡದ ಸಹ ಆಟಗಾರರು ವಿಜಯ್ ಶಂಕರ್‌ಗೆ ಶುಭಹಾರೈಸುತ್ತಿದ್ದಾರೆ.
2018ರಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವಿಜಯ್ ಶಂಕರ್ 12 ಏಕದಿನ ಹಾಗೂ 9 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದ ವಿಜಯ್ ಶಂಕರ್ ಬಳಿಕ ತಂಡದಿಂದ ಸ್ಥಾನವನ್ನು ಕಲೆದುಕೊಂಡಿದ್ದರು.
ಕಳೆದ ಐಪಿಎಲ್ ಆವೃತ್ತಿಯಲ್ಲಿ 244 ರನ್ ಹಾಗೂ 1 ವಿಕೆಟ್ ಕಿತ್ತಿದ್ದ ವಿಜಯ್ ಶಂಕರ್‌ಗೆ ಈ ಬಾರಿಯ ಐಪಿಎಲ್ ಬಹಳ ಮಹತ್ವದ್ದಾಗಿದೆ. ಈ ಆವೃತ್ತಿಯ ಐಪಿಎಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಅವಕಾಶ ವಿಜಯ್ ಶಂಕರ್‌ಗೆ ಇದೆ.