ಉತ್ತರ ಕರ್ನಾಟಕದ ಕೆಲವು ಕಡೆ ಭಾರಿ ಮಳೆಯಿಂದ ಮಲಪ್ರಭಾ ನದಿ ತಟದಲ್ಲಿ ನೆರೆಯ ಭೀತಿ ಸೃಷ್ಟಿಯಾಗಿದೆ. ನದಿ ತಟದಲ್ಲಿ ಬರುವ ರಾಮದುರ್ಗಾ, ಬಾದಾಮಿ ಹಾಗೂ ಹುನುಗಂದ ತಾಲೂಕಿನ ಹಲವು ಗ್ರಾಮಗಳಲ್ಲಿ ಮಳೆ ಇಲ್ಲದಿದ್ದರೂ ನೆರೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಬಾದಾಮಿ ಕ್ಷೇತ್ರದ ಶಾಸಕರು ಆಗಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ.
ಈ ಬಗ್ಗೆ ಟ್ವೀಟರ್ನಲ್ಲಿ ತಿಳಿಸಿರುವ ಸಿದ್ದರಾಮಯ್ಯ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ನಿಗಾ ವಹಿಸಿ ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಸೂಚಿಸಿದ್ದೇನೆ. ಜನರು ಹೆದರುವ ಅಗತ್ಯವಿಲ್ಲ ಎಂದಿದ್ದಾರೆ.
ಇದರ ಜೊತೆಗೆ ಜಿಲ್ಲಾಡಳಿತ ಜೊತೆಗೆ ಕೊರೊನಾ ಪರಿಸ್ಥಿತಿ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಹಶೀಲ್ದಾರರಿಂದ ಸಿದ್ದರಾಮಯ್ಯ ಪಡೆದುಕೊಂಡರು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಿದರು.
ಕೊರೊನಾ ಸೊಂಕಿಗೆ ಒಳಗಾಗಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ನವೀಲು ತೀರ್ಥ ಜಲಾಶಯದಿಂದ 300 ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಮಲ ಪ್ರಭಾ ನದಿಯಲ್ಲಿ ಪ್ರವಾಹ ಭೀತಿ ಊಂಟಾಗಿದೆ. ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ.
ದೇಗುಲದ ಸುತ್ತಲೂ ನೀರು ಆವರಿಸಿರುವುದರಿಂದ ಭಕ್ತರು ಪರದಾಡುವಂತಾಗಿದೆ. ನಾರಾಯಣಪುರ ಡ್ಯಾಂಗೆ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದೆ. ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ನದಿಗಳು ತುಂಬಿ ಹರಿಯುತ್ತಿದೆ. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉಡುಪಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ಸುತ್ತಮುತ್ತಲೂ ತಗ್ಗು ಪ್ರದೇಶಗಳ ತುಂಬ ನೀರು ನಿಂತಿದೆ. ಇಂದು ಮತ್ತು ನಾಳೆ ಕರಾವಳಿಯಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.