ನವದೆಹಲಿ: 2020ರ ‘ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕ’ದಲ್ಲಿ (ಎಸ್‌ಸಿಐ) ಭಾರತದ ನಗರಗಳಾದ ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ತೀವ್ರ ಕುಸಿತ ಕಂಡಿವೆ. ಸಿಂಗಪುರ ಮೊದಲ ಸ್ಥಾನ ಪಡೆದಿದೆ.
ಅಭಿವೃದ್ಧಿ ವ್ಯವಸ್ಥಾಪನಾ ಸಂಸ್ಥೆ (ಐಎಂಡಿ) ಮತ್ತು ಸಿಂಗಪುರ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯವು (ಎಸ್‌ಯುಟಿಡಿ) ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋವಿಡ್-19ರ ಸಂದರ್ಭದಲ್ಲಿ ತಂತ್ರಜ್ಞಾನ ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿಸಿ ರ‍್ಯಾಂಕಿಂಗ್ ನೀಡಿವೆ.
ಭಾರತದ ನಗರಗಳ ಪೈಕಿ ಹೈದರಾಬಾದ್ ಮೊದಲ ಸ್ಥಾನ ಪಡೆದಿದ್ದರೆ (85), ನಂತರದ ಸ್ಥಾನಗಳಲ್ಲಿ ನವದೆಹಲಿ (86), ಮುಂಬೈ (93), ಬೆಂಗಳೂರು (95) ಇವೆ.
‘ಭಾರತದ ನಗರಗಳು ಸೂಚ್ಯಂಕದಲ್ಲಿ ಗಣನೀಯ ಕುಸಿತ ಕಾಣಲು ಕೋವಿಡ್ ಕಾರಣ.
ಕೋವಿಡ್‌ನಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಲು ಈ ನಗರಗಳು ಸೂಕ್ತ ತಯಾರಿಯನ್ನು ಮಾಡಿಕೊಂಡಿರಲಿಲ್ಲ. ಇದರಿಂದಾಗಿ ನಗರಗಳ ತಾಂತ್ರಿಕ ಪ್ರಗತಿಗೆ ಹಿನ್ನಡೆ ಉಂಟಾಗಿದೆ’ ಎಂದು ವರದಿ ಹೇಳಿದೆ.
‘ವಾಯುಮಾಲಿನ್ಯ ತಡೆಗಟ್ಟುವುದು ಈ ನಗರಗಳ ಪ್ರಮುಖ ಕಾರ್ಯಾಸೂಚಿಯಾಗಬೇಕು. ಬೆಂಗಳೂರು ಮತ್ತು ಮುಂಬೈ ಸಂಚಾರ ದಟ್ಟಣೆಯನ್ನು ತಗ್ಗಿಸಬೇಕು. ಹೈದರಾಬಾದ್ ಮತ್ತು ನವದೆಹಲಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದೆ.
ಸಿಂಗಪುರ, ಹೆಲ್ಸಿಂಕಿ, ಆಕ್ಲೆಂಡ್, ಓಸ್ಲೊ, ಕೊಪನ್‌ಹೇಗನ್, ಜಿನೇವಾ, ತೈಪೆ, ಆಯಮ್‌ಸ್ಟರ್‌ಡ್ಯಾಂ ಮತ್ತು ನ್ಯೂಯಾರ್ಕ್ ನಗರಗಳು ಸೂಚ್ಯಂಕದ ಮೊದಲ ಹತ್ತು ಸ್ಥಾನಗಳಲ್ಲಿ ಇವೆ. 109 ನಗರಗಳು ಸೂಚ್ಯಂಕದಲ್ಲಿ ಸ್ಥಾನ ಪಡೆದಿದ್ದು, ಪ್ರತಿ ನಗರದ 120 ಪ್ರದೇಶಗಳ ನಿವಾಸಿಗಳ ಜೀವನ ಮಟ್ಟ ಮತ್ತು ಗ್ರಹಿಕೆಗಳನ್ನು ಆಧಾರಿಸಲಾಗಿದೆ.
‘ತಂತ್ರಜ್ಞಾನವು ನಗರೀಕರಣ ಪ್ರಕ್ರಿಯೆಯಲ್ಲಿ ಕಂಡು ಬರುವ ನ್ಯೂನತೆಗಳನ್ನು ತಗ್ಗಿಸುವುದಾಗಿದೆ. ಈ ಹಿನ್ನೆಲೆಯಲ್ಲಿ ‘ಸ್ಮಾರ್ಟ್ ಸಿಟಿ’ ಪರಿಕಲ್ಪನೆಯು ರೂಪುಗೊಂಡಿದೆ. ಏಪ್ರಿಲ್ ಮತ್ತು ಮೇನಲ್ಲಿ 109 ನಗರಗಳಲ್ಲಿ ಸಮೀಕ್ಷೆ ನಡೆಸಿ, ಇಲ್ಲಿನ ನಿವಾಸಿಗಳಿಗೆ ಆರೋಗ್ಯ, ಸುರಕ್ಷತೆ, ಅವಕಾಶ ಮತ್ತು ಆಡಳಿತದಲ್ಲಿ ತಂತ್ರಜ್ಞಾನದ ಬಳಕೆ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಕೋವಿಡ್ ಪರಿಣಾಮ ಕುರಿತು ನಿರ್ಲಕ್ಷ ಮಾಡಲಾಗಿಲ್ಲ’ ಎಂದು ಐಎಂಡಿಯ ಪ್ರೊ. ಆರ್ಥುರೊ ಬ್ರಿಸ್ ಹೇಳಿದ್ದಾರೆ.
ಸೂಚ್ಯಂಕ
ನಗರ 2020;2019
ಹೈದರಾಬಾದ್ 85;67
ನವದೆಹಲಿ 86;68
ಮುಂಬೈ 93;78
ಬೆಂಗಳೂರು 95;79