ಈಗಾಗಲೇ ಅಧಿಕಾರಾವಧಿ ಮುಗಿದಿರುವ ಗ್ರಾಮ ಪಂಚಾಯ್ತಿಗಳಿಗೂ ಡಿಸೆಂಬರ್ನಲ್ಲಿ ಚುನಾವಣೆ ಘೋಷಣೆಯಾಗಲಿದೆ. ನಿಗದಿತ ಸಮಯದಲ್ಲೇ ಚುನಾವಣೆ ನಡೆಸುವುದಾಗಿ ಆಯೋಗ ಮುಂದಾಗಿರುವುದರಿಂದ ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದ್ದು, ಮೂರು ಪಕ್ಷಗಳಿಗೆ ಈ ಚುನಾವಣೆ ಕೂಡ ಸವಾಲಾಗಿ ಪರಿಣಮಿಸಲಿದೆ. ಸರ್ಕಾರದ ಸಾಧನೆಗಳ ಮೇಲೆ ಬಿಜೆಪಿ ಚುನಾವಣೆಗೆ ಹೋದರೆ, ಪ್ರತಿಪಕ್ಷಗಳು ಸರ್ಕಾರದ ವೈಫಲ್ಯಗಳಿಗೆ ಚುನಾವಣಾ ಅಸ್ತ್ರ ಎನ್ನುತ್ತಿವೆ. ಕೋವಿಡ್-19 ನಿಯಂತ್ರಣ ಮಾಡುವಲ್ಲಿ ವಿಫಲವಾಗಿರುವುದು, ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಆರೋಪ, ಇತ್ತೀಚೆಗೆ ರಾಜ್ಯದಲ್ಲಿ ಸುಳಿದ ಮಹಾಮಳೆಯಿಂದ ಉಂಟಾದ ಪ್ರವಾಹ ಹಾಗೂ ಸಂಕಷ್ಟಕ್ಕೊಳಕ್ಕಾಗದ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ಕಲ್ಪಿಸದಿರುವುದು ಸೇರಿದಂತೆ ಹಲವು ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಚುನಾವಣೆಗೆ ಧುಮುಕುತ್ತಿವೆ.
ಗ್ರಾಮಚಾಯ್ತಿ ಚುನಾವಣೆ ಮುಗಿದ ನಂತರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೂ ಚುನಾವಣೆ ನಡೆಯಲಿದೆ. ಇದು ಪಕ್ಷದ ಗುರುತಿನ ಮೇಲೆ ನಡೆಯುತ್ತಿರುವುದರಿಂದ ಈ ಚುನಾವಣೆಯು ಕೂಡ ಮೂರು ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗುತ್ತಿದ್ದು, ಹೆಚ್ಚು ಸ್ಥಾನಗಳಿಸುವ ಪಕ್ಷಗಳಿಗೆ ಮುಂದಿನ ವಿಧಾನಸಭೆ ಚುನಾವಣೆ ತಯಾರಿಗೆ ವೇದಿಕೆಯಾಗಲಿದೆ.