ಪಶ್ಚಿಮ ಬಂಗಾಳದಲ್ಲಿ ಬಂಗಾಳಿ ಮತ್ತು ಬಂಗಾಳಿ ಅಲ್ಲದವರ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನಾವು ಬಂಗಾಳದಲ್ಲಿರುವ ಬಿಹಾರಿಗಳು,ಯುಪಿ, ರಾಜಸ್ಥಾನ್ ಸೇರಿದಂತೆ ಎಲ್ಲರೊಂದಿಗೆ ಹೆಜ್ಜೆ ಹಾಕುತ್ತೇವೆ. ಆದರೆ ನಾವು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗುಜರಾತ್ ಎಂದಿಗೂ ಬಂಗಾಳವನ್ನು ಆಳಲಾಗದು. ಬಂಗಾಳದಲ್ಲಿ ವಾಸಿಸುವ ಜನರು ಮಾತ್ರ ಬಂಗಾಳವನ್ನು ಆಳುತ್ತಾರೆ” ಎಂದು ಉತ್ತರ ಬಂಗಾಳದ ಅಲಿಪುರ್ದಾನ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಹೇಳಿದ್ದಾರೆ.
ಈ ಮೂಲಕ ಅವರು ಪರೋಕ್ಷವಗಿ ಮೋದಿ ಮತ್ತು ಶಾ ವಿರುದ್ದ ಹರಿಹಾಯ್ದ ಮಮತಾ ಬ್ಯಾನರ್ಜಿ, ವಿಧಾನಸಭಾ ಚುನಾವಣೆಗೆ ಮುನ್ನ ರಾಜ್ಯದಲ್ಲಿ “ಹೊರಗಿನವರ ವಿರುದ್ಧ ಒಳಗಿನವರು” ಎಂಬ ಚರ್ಚೆಯನ್ನು ಹುಟ್ಟು ಹಾಕಿರುವ ಮಮತಾ ಬ್ಯಾನರ್ಜಿ ಇಂದು ಅದಕ್ಕೆ ಮೇಲಿನಂತೆ ಸ್ಪಷ್ಟೀಕರಣ ನೀಡಿದ್ದಾರೆ.
“ಅಸ್ಸಾಂ ಮತ್ತು ತ್ರಿಪುರದಲ್ಲಿ ಏನು ನಡೆಯುತ್ತಿದೆ ನೋಡಿ. ಎನ್‌ಆರ್‌ಸಿ ಹೆಸರಿನಲ್ಲಿ ಅವರು ಎಲ್ಲರನ್ನೂ ಹೆದರಿಸಿದ್ದಾರೆ. ಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಕೂಡ ಇದೆ. ಪ್ರತಿ ರಾಜ್ಯವೂ ಇದನ್ನು ಮಾಡುತ್ತಿದೆ, ಆದರೆ ನಾವು ಅದನ್ನು ಮಾಡಿಲ್ಲ. ನಾವು ಅವರನ್ನು ಮಾಡಲು ಬಿಡುವುದೂ ಇಲ್ಲ” ಎಂದು ಅವರು ಹೇಳಿದ್ದಾರೆ.
ನೆರೆಯ ರಾಜ್ಯಗಳ ಜನರನ್ನು ಸ್ವೀಕರಿಸುವುದು ಬಂಗಾಳಿ ಸಂಸ್ಕೃತಿಗೆ ಹೊಸದೇನಲ್ಲ ಎಂದು ಸಾಬೀತುಪಡಿಸುವ ಪ್ರಯತ್ನವನ್ನು ಬಿಜೆಪಿ ಮುಂದುವರಿಸಿದೆ. ಆದರೆ ಮಮತಾ ಎನ್‌ಆರ್‌ಸಿ, ಎನ್‌ಪಿಆರ್ ಉಲ್ಲೇಖಿಸುತ್ತ, ಬಂಗಾಳದಲ್ಲಿರವವರೆಲ್ಲ ಬಂಗಾಳಿಗಳೇ ಎಂದು ಹೇಳುತ್ತ ಬಂದಿದ್ದಾರೆ.
ಸೋಮವಾರ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣವನ್ನು ಬಂಗಾಳದ ಸಾಂಸ್ಕೃತಿಕ ಅಸ್ಮಿತೆ ಎಂದು ಪರಿಗಣಿಸಲಾದ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಉಲ್ಲೇಖದೊಂದಿಗೆ ಪ್ರಾರಂಭಿಸಿದರು.
ಕಳೆದ ತಿಂಗಳುಗಳಿನಿಂದ ಬಿಜೆಪಿಯು ರಾಜ್ಯದ ಸಾಂಸ್ಕೃತಿಕ ಐಕಾನ್‌ಗಳ ಮೇಲೆ ವ್ಯಾಪಕವಾಗಿ ಗಮನ ಹರಿಸಿದೆ. ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಜೋರಾಗಿ ಆಚರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತಾಜಿ ಜನ್ಮದಿನ ಆಚರಣೆಗೆ ಕೊಲ್ಕೊತ್ತಕ್ಕೆ ಬಂದಿದ್ದರು.
ಆದರೆ ಟ್ಯಾಗೋರ್ ಅವರ ಜನ್ಮಸ್ಥಳ ಇತ್ಯಾದಿ ವಿಷಯಗಳನ್ನು ಉಲ್ಲೇಖಿಸುವಾಗ ಬಿಜೆಪಿ ನಾಯಕರು ಹಲವಾರು ತಪ್ಪುಗಳನ್ನು ಮಾಡುತ್ತಾ ಬಂದಿದ್ದಾರೆ. ನೇತಾಜಿಯ ಜನ್ಮದಿನವನ್ನು ಆಚರಿಸುವ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಬೆಂಬಲಿಗರು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಕ್ಕೆ, ಸರ್ಕಾರಿ ಕಾರ್ಯಕ್ರಮದಲ್ಲಿ ಧಾರ್ಮಿಕ ಘೋಷಣೆ ಸಲ್ಲದು ಎಂದು ಮುಖ್ಯಮಂತ್ರಿ ಮಮತಾ ಪ್ರಧಾನಿಯಿದ್ದ ವೇದಿಕೆಯಿಂದ ಹೊರ ನಡೆದು ಪ್ರತಿಭಟನೆ ದಾಖಲಿಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್‌ನಲ್ಲಿ ರಾಜ್ಯ ಚುನಾವಣೆ ನಡೆಯಲಿದ್ದು ಟಿಎಂಸಿ ಮತ್ತು ಬಿಜೆಪಿ ನಡುವೆ ವಿಪರೀತ ಜಿದ್ದಾಜಿದ್ದಿ ನಡೆಯುತ್ತಿದೆ.