ಬೀಳಗಿ: ವಾಜಪೇಯಿ, ಅಂಬೇಡ್ಕರ್ ನಗರ ವಸತಿ ಯೋಜನೆಯಡಿ ಮಂಜೂರಾದ ಆಶ್ರಯ ಮನೆಗಳಿಗೆ ಎರಡು ವರ್ಷ ಕಳೆದರೂ ಒಂದು ಕಂತಿನ ಸಹಾಯಧನ ಕೂಡ ದೊರೆಯದೆ ಬಡವರ ಆಶ್ರಯ ಮನೆಗಳು ಅರ್ಧಕ್ಕೆ ನಿಂತಿವೆ. ಪರಿಣಾಮ, ಬಡವರು ತಮ್ಮ ಕನಸಿನ ಮನೆಯನ್ನು ಪೂರ್ಣಗೊಳಿಸಲು ಪರಿತಪಿಸುವಂತಾಗಿದೆ.
ಅತಂತ್ರ ಸ್ಥಿತಿಯಲ್ಲಿ ಆಶ್ರಯ: 2016-17 ಹಾಗೂ 2017-18ನೇ ಸಾಲಿನ ವಾಜಪೇಯಿ-ಅಂಬೇಡ್ಕರ್ ನಗರ ವಸತಿ ಯೋಜನೆ ಅಡಿಯಲ್ಲಿ ಪಟ್ಟಣಕ್ಕೆ ಒಟ್ಟು 84 ಮನೆಗಳು ಮಂಜೂರಾಗಿವೆ. ಎಲ್ಲ ಮನೆಗಳಿಗೂ ಮನೆ ಕಟ್ಟಿಕೊಳ್ಳಲು ಅಧಿಕೃತ ಪತ್ರವನ್ನು ಕೂಡ ಫಲಾನುಭವಿಗಳಿಗೆ ನೀಡಲಾಗಿದೆ. ಆದೇಶ ಪ್ರತಿ ಪಡೆದುಕೊಂಡ ಫಲಾನುಭವಿಗಳು ಈಗಾಗಲೇ ಮನೆಗಳನ್ನು ಕೂಡ ಕಟ್ಟಲಾರಂಭಿಸಿದ್ದಾರೆ. ಹಲವಾರು ಮನೆಗಳ 1, 2 ಮತ್ತು 3 ಹಂತದ ಜಿಪಿಎಸ್ ಕೂಡ ರಾಜೀವ ಗಾಂಧಿ ವಸತಿ ನಿಗಮದ ಬೋರ್ಡ್‌ಗೆ ಅಳವಡಿಸಲಾಗಿದ್ದು, ಎಲ್ಲ ಜಿಪಿಎಸ್‌ಗಳು ಸ್ವೀಕೃತವಾಗಿವೆ.
ಆದರೂ ಕೂಡ ಇದುವರೆಗೆ ಆಶ್ರಯ ಮನೆಗಳ ಒಂದು ಕಂತಿನ ಸಹಾಯಧನದ ಹಣವು ಫಲಾನುಭವಿಗಳ ಖಾತೆಗೆ ಪಾವತಿಯಾಗಿಲ್ಲ. 84 ಫಲಾನುಭವಿಗಳ ಮನೆಗಳೆಲ್ಲವೂ ಅರ್ಧಕ್ಕೆ ನಿಂತು ಬಡವರ ಆಶ್ರಯ ಮನೆಗಳ ಯೋಜನೆ ಅತಂತ್ರವಾಗಿದೆ.
ಬಿಡಿಗಾಸಿಲ್ಲದೆ ಕಂಗಾಲು: ಸಾಮನ್ಯ ವರ್ಗಕ್ಕೆ ರಾಜ್ಯದ 1.20 ಲಕ್ಷ ಮತ್ತು ಕೇಂದ್ರದ 1.50 ಲಕ್ಷ ಸಹಾಯಧನ ಸೇರಿ ಒಟ್ಟು 2.70 ಲಕ್ಷ ಫಲಾನುಭವಿಗಳ ಖಾತೆಗೆ ಜಮೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರಾಜ್ಯದ 1.50 ಲಕ್ಷ ಹಾಗೂ ಕೇಂದ್ರದ 1.50 ಲಕ್ಷ ಸಹಾಯಧನ ಸೇರಿ ಒಟ್ಟು 3 ಲಕ್ಷ ರೂ, ಸಹಾಯಧನ ಫಲಾನುಭವಿಗಳ ಖಾತೆಗೆ ಜಮೆಯಾಗಬೇಕು. ಆದರೆ, ಇದುವರೆಗೂ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಬಿಡಿಗಾಸು ಸಹಾಯಧನ ಸಿಗದೆ ಇರುವ ಪರಿಣಾಮ, ಸರಕಾರದ ಸಹಾಯಧನ ಬರುತ್ತದೆ ಎಂದು ಸಾಲಸೋಲ ಮಾಡಿ ಸಾಮಗ್ರಿ ಖರೀದಿಸಿ ಮನೆ ಕಟ್ಟಡ ಆರಂಭಿಸಿದ್ದಾರೆ. ಮನೆ ಅರ್ಧಕ್ಕೆ ನಿಂತಿವೆ. ಸಾಲದ ಹೊರೆಯಾಗಿದೆ. ಸಹಾಯಧನ ಮರೀಚಿಕೆಯಾಗಿದೆ. ಪರಿಣಾಮ, ಬಿಡಿಗಾಸಿಲ್ಲದೆ ಬಡ ಫಲಾನುಭವಿಗಳು ಕಂಗಾಲಾಗಿದ್ದಾರೆ.
25 ಪರಿಶಿಷ್ಟ ಜಾತಿ, ತಲಾ 4 ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಸಾಮನ್ಯ ವರ್ಗದ 51 ಫಲಾನುಭವಿಗಳು ಸಹಾಯಧನ ಇಂದು ಬಂದೀತು, ನಾಳೆ ಬಂದೀತು ಎಂದು ತಮ್ಮ ಬ್ಯಾಂಕ್ ಅಕೌಂಟ್ ತಪಾಸಣೆ ಮಾಡುತ್ತ ಸಹಾಯಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸರಕಾರ ಕೂಡಲೆ ಆಶ್ರಯ ಮನೆಗಳ ಸಹಾಯಧನ ಕಂತನ್ನು ಜಮೆ ಮಾಡುವ ಮೂಲಕ ಬಡವರಿಗೆ ಆಸರೆಯಾಗಬೇಕು ಎಂದು ಹಲವಾರು ಫಲಾನುಭವಿಗಳು ಒತ್ತಾಯಿಸಿದ್ದಾರೆ.