ಲಕ್ನೋ : ಅಯೋಧ್ಯೆ ಇಂದು ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಕೆಲವೇ ಗಂಟೆಗಳಲ್ಲಿ ನಡೆಯಲಿರುವ ರಾಮ ಮಂದಿರ ನಿರ್ಮಾಣ ಭೂಮಿ ಪೂಜೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡಿವೆ. ಅಯೋಧ್ಯೆ ನಗರವು ಈ ಮಹಾ ಯಜ್ಞಕ್ಕಾಗಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ . ಈ ಹಿನ್ನೆಲೆಯಲ್ಲಿ ರಾಮ ಮಂದಿರದ ಮಾದರಿಯನ್ನು ಶ್ರೀ ರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಂಗಳವಾರ ಬಿಡುಗಡೆ ಮಾಡಿದೆ. ಮೂರು ಅಂತಸ್ತಿನ ಕಲ್ಲಿನ ರಚನೆಯಲ್ಲಿ ಗುಮ್ಮಟಗಳು ಮತ್ತು ಕಂಬಗಳೊಂದಿಗೆ 161 ಅಡಿ ಎತ್ತರದಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗುವುದು.
ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ 28 ವರ್ಷಗಳ ನಂತರ ಅಯೋಧ್ಯೆಗೆ ಪ್ರವೇಶಿಸುತ್ತಿದ್ದಾರೆ. ಅವರು ರಾಮ ಮಂದಿರ ಹೋರಾಟದಲ್ಲಿ ಪಾಲ್ಗೊಂಡ ನಂತರ ತಿರಂಗಾ ಯಾತ್ರೆಯ ಅಂಗವಾಗಿ 1992 ರ ಜನವರಿ 18 ರಂದು ಅಯೋಧ್ಯೆಗೆ ತೆರಳಿದ್ದರು.

ಬರೋಬ್ಬರಿ 28 ವರ್ಷಗಳ ನಂತರ ಅಯೋಧ್ಯೆಗೆ ಪಾದಸ್ಪರ್ಶ ಮಾಡುತ್ತಿರುವ ನರೇಂದ್ರ ಮೋದಿ, ರಾಮ್ ಲಲ್ಲಾ ದರ್ಶನ ಪಡೆಯಲಿದ್ದಾರೆ.ಅಂದು ಅವರು ಆಡಿದ ಮಾತುಗಳು ಇಂದು ನಿಜವಾಗಿವೆ. ರಾಮ ಮಂದಿರ ನಿರ್ಮಾಣದ ಸಮಯದಲ್ಲಿ ಮತ್ತೆ ಬರುವುದಾಗಿ ಪ್ರತಿಜ್ಞೆ ಅಂದು ಮಾಡಿದ್ದರು. ಇಂದು ಮೋದಿಯವರ ಆ ಪ್ರತಿಜ್ಞೆ ನೆರವೇರಿದಂತಾಗಿದೆ. ಶ್ರೀ ರಾಮಮಂದಿರದ ಭೂಮಿ ಪೂಜೆ ಅವರ ಅಮೃತ ಹಸ್ತದಿಂದ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಿಂದ ‘ತಿರಂಗಯಾತ್ರೆಯನ್ನು ಆರಂಭಿಸಿದ್ದರು. ಅಲ್ಲಿಂದ ಪ್ರಾರಂಭವಾದ ಯಾತ್ರೆ ವಿವಿಧ ರಾಜ್ಯಗಳ ಮೂಲಕ ತಮ್ಮ ಪ್ರಯಾಣವನ್ನು ಮುಂದುವರೆಸಿಕೊಂಡು ಜನವರಿ 18 ರಂದು ಉತ್ತರ ಪ್ರದೇಶವನ್ನು ತಲುಪಿದ್ದರು.

ಫೈಜಾಬಾದ್ ಬಳಿಯ ಮೈದಾನದಲ್ಲಿ ಅಂದು ಬೃಹತ್ ಸಾರ್ವಜನಿಕ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ಭಾಗವಹಿಸಿದ್ದರು. ಮರುದಿನ ಮುರಳಿ ಮನೋಹರ್ ಜೋಶಿ ಅವರೊಂದಿಗೆ ಅಯೋಧ್ಯೆಯ ಬಾಲ ರಾಮನ ದರ್ಶನ ಪಡೆದಿದ್ದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ ಮಾತನಾಡಿ, ದೇವಾಲಯದ ನಿರ್ಮಾಣದ ಸಮಯದಲ್ಲಿ ಮತ್ತೆ ಅಯೋಧ್ಯೆಗೆ ಬರುವುದಾಗಿ ಹೇಳಿದ್ದರು ಎಂದು ಹಿರಿಯ ಪತ್ರಕರ್ತ ಮಹೇಂದ್ರ ತ್ರಿಪಾಠಿ ನೆನಪಿಸಿಕೊಂಡರು.
ಪ್ರಧಾನ ಮಂತ್ರಿಯ ಭೇಟಿಯ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಲಾಗಿದೆ.
ಅಯೋಧ್ಯೆಯಲ್ಲಿ ಸುಮಾರು 3,500 ಕ್ಕೂ ಹೆಚ್ಚು ಪೊಲೀಸರು ಭದ್ರತಾ ಕರ್ತವ್ಯದಲ್ಲಿದ್ದಾರೆ.
ಎಸ್‌ಪಿಜಿ ಕಮಾಂಡೋಗಳು ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಭದ್ರತಾ ದೃಷ್ಟಿಯಿಂದ ವಶಕ್ಕೆ ಪಡೆದಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇವಲ 175 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಕೋವಿಡ್ -19 ರ ಕಾರಣದಿಂದಾಗಿ ಹೆಚ್ಚಿನ ಜನರನ್ನು ಕಾರ್ಯಕ್ರಮಕ್ಕೆ ಅನುಮತಿಸುವುದಿಲ್ಲ ಎಂದು ಅಯೋಧ್ಯೆ ಜಿಲ್ಲಾ ಎಸ್‌ಪಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಳಿಗ್ಗೆ 9.30 ಕ್ಕೆ ದೆಹಲಿಯಿಂದ ಹೊರಟು ಬೆಳಿಗ್ಗೆ 11.30 ಕ್ಕೆ ಲಕ್ನೋ ತಲುಪಲಿದ್ದಾರೆ. ಅಲ್ಲಿಂದ ಅಯೋಧ್ಯೆಯನ್ನು ತಲುಪಲಿದ್ದಾರೆ. ರಾಮ ಜನ್ಮಭೂಮಿ ಪ್ರದೇಶದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಹನುಮಾನ್ ಗಡಿಯಲ್ಲಿ ಮೊದಲು ಪ್ರಾರ್ಥನೆ ಸಲ್ಲಿಸುತ್ತಾರೆ.ಭೂಮಿಪುಜಾ ಕಾರ್ಯಕ್ರಮ ಮಧ್ಯಾಹ್ನ 12.30 – 12.45 ರವರೆಗೆ ನಡೆಯಲಿದೆ.
