ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಣ್ಣ ಪತ್ರಿಕೆಗಳ ನೆರವಿಗೆ ಧಾವಿಸಬೇಕು, ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ. ರಮೇಶ್ ಪತ್ರ ಬರೆದಿದ್ದಾರೆ.
ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಗಳಾದ ತಮ್ಮಲ್ಲಿ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ವತಿಯಿಂದ ಮನವಿ ಮಾಡಿಕೊಳ್ಳುವುದೇನೆಂದರೆ, ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಸಣ್ಣ ಪತ್ರಿಕೆಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪತ್ರಿಕೆಗಳಿಗೆ ಸರ್ಕಾರದಿಂದ ಯಾವುದೇ ಜಾಹೀರಾತು ಸೌಲಭ್ಯ ಮತ್ತಿತರೆ ನೆರವು ಸಿಗುತ್ತಿಲ್ಲ. ಸರ್ಕಾರದಿಂದ ದೊರಕುವ ಜಾಹೀರಾತು ಮತ್ತಿತರೆ ಸೌಲಭ್ಯಗಳು ರಾಜ್ಯ ಮಟ್ಟದ ಪತ್ರಿಕೆಗಳಿಗೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಸುಮಾರು 600 ಪತ್ರಿಕೆಗಳಿಗೆ ಮಾತ್ರ ಜಾಹೀರಾತು, ಬಸ್ ಪಾಸ್, ಮಾನ್ಯತಾ ಕಾರ್ಡ್ ಸೌಲಭ್ಯ ದೊರಕುತ್ತಿದೆ. ಇಂದಿನ ಸ್ಪರ್ಧಾತ್ಮಕ ಸಂದರ್ಭದಲ್ಲಿ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳೇ ಸಂಕಷ್ಟದಲ್ಲಿವೆ. ಮುದ್ರಣ ಸಾಮಾಗ್ರಿಯ ದರ ಹೆಚ್ಚಳ, ದೃಶ್ಯಮಾಧ್ಯಮಗಳ ಪೈಪೋಟಿಯಿಂದಾಗಿ ಮುದ್ರಣ ಮಾಧ್ಯಮ ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಇನ್ನು ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿಲ್ಲದ ಪ್ರಕಾಶಕರು, ಸಂಪಾದಕರ ಪರಿಸ್ಥಿತಿಯಂತೂ ಇನ್ನೂ ಶೋಚನೀಯವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಎರಡು ನಾಲ್ಕು ವರ್ಷಗಳಿಂದಂತೂ ಸಣ್ಣ ಪತ್ರಿಕೆಗಳನ್ನು ನಡೆಸುವುದೇ ಅಸಾಧ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಯಲ್ಲಾದ ಬದಲಾವಣೆಗಳಿಂದಾಗಿ ಖಾಸಗಿ ಜಾಹೀರಾತುಗಳನ್ನೇ ನಂಬಿ ಸಣ್ಣ ಪತ್ರಿಕೆಗಳನ್ನು ಹೊರತರುತ್ತಿದ್ದವರು, ಪತ್ರಿಕೆಗಳನ್ನು ಪ್ರಕಟಿಸುವುದಿರಲಿ ತಮ್ಮ ಜೀವನ ನಡೆಸುವುದೇ ದುಸ್ತರ ಎಂಬಂತಾಗಿದೆ. ಇದರ ಮಧ್ಯೆ ಇಡೀ ದೇಶವನ್ನು ಕಾಡುತ್ತಿರುವ ‘ಕೊರೋನಾ’ ವೈರಸ್ ಭೀತಿಯಿಂದ ಕಳೆದ ವರ್ಷ ದೇಶಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿದ್ದರ ಪರಿಣಾಮ ಸಣ್ಣ ಪತ್ರಿಕೆಗಳ ಮೇಲೂ ಉಂಟಾಯ್ತು.

ಒಂದೆಡೆ ಪತ್ರಿಕೆಗಳನ್ನು ಹೊರತರಲು ಆಗುತ್ತಿಲ್ಲ. ಜೊತೆಗೆ ಜೀವನವನ್ನೂ ನಡೆಸುವುದು ಅಸಾಧ್ಯ ಎನ್ನುವಂತಾಗಿ ಹತ್ತಾರು ಪತ್ರಿಕೆಗಳನ್ನು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿದೆ. ತಮ್ಮ ಜೀವನವನ್ನೇ ನಡೆಸಲು ಹರಸಾಹಸ ಪಡುತ್ತಿರುವ ಸಂಪಾದಕರಿಂದ, ತಮ್ಮ ಪತ್ರಿಕೆಗಳಲ್ಲಿ ಕೆಲಸ ಮಾಡುವ ವರದಿಗಾರರು, ಸಿಬ್ಬಂದಿಗಳಿಗೆ ವೇತನ ಮತ್ತಿತರೆ ಸೌಲಭ್ಯ ನೀಡುವುದು ಅಸಾಧ್ಯದ ಮಾತು. ಹಾಗಾಗಿ ರಾಜ್ಯದಲ್ಲಿರುವ 5 ಸಾವಿರಕ್ಕೂ ಹೆಚ್ಚಿನ ಸಣ್ಣ ಪತ್ರಿಕೆಗಳ ಹಾಗೂ ಆನ್‌ಲೈನ್ ಪೋರ್ಟಲ್‌ಗಳ ಸಂಪಾದಕರು, ವರದಿಗಾರರು, ಸಿಬ್ಬಂದಿಗಳ ಪರಿಸ್ಥಿತಿ ಶೋಚನೀಯವಾಗಿದೆ.
ಇಂತಹ ಸಂದರ್ಭದಲ್ಲೇ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ನಿಯಂತ್ರಿಸುವ ಉದ್ದೇಶದಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಇದು ಸಂಕಷ್ಟದಲ್ಲಿರುವ ಸಣ್ಣ ಪತ್ರಿಕೆಗಳ ಮೇಲೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯ ಸರ್ಕಾರ ಘೋಷಿಸಿರುವ 1250 ಕೋಟಿ ರೂ.ಗಳ ನೆರವಿನ ಪ್ಯಾಕೇಜ್‌ನಲ್ಲಿ ಸಣ್ಣ ಪತ್ರಿಕೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ನೌಕರರಿಗೆ ಲಾಕ್‌ಡೌನ್ ಸಂದರ್ಭದಲ್ಲಿ ವೇತನ ಸಹಿತ ರಜೆ, ಬಿಪಿಎಲ್ ಕಾಡ್‌ರ್ದಾರರಿಗೆ ಪಡಿತರ, ಉಚಿತ ಗ್ಯಾಸ್ ಮತ್ತಿತರೆ ಸೌಲಭ್ಯವನ್ನು ಘೋಷಿಸಿವೆ. ಕಾರ್ಖಾನೆಗಳ ನೌಕರರಿಗೂ ವೇತನಸಹಿತ ರಜೆ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳಿಗೆ ಜಾಹೀರಾತು ಬಿಲ್‌ಗಳ ಪಾವತಿಗೆ ಭರವಸೆ ಸಹ ಸಿಕ್ಕಿದೆ.
ಆದರೆ, ಸಣ್ಣ ಪತ್ರಿಕೆಗಳ ಸಂಪಾದಕರು, ವರದಿಗಾರರು, ಸಿಬ್ಬಂದಿಗಳು ಯಾವುದೇ ಪಿಎಫ್, ಇಎಸ್‌ಐ ಸೇರಿದಂತೆ ಈ ರೀತಿಯ ಎಲ್ಲ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಕೂಡಲೇ ಅತ್ಯಂತ ಸಂಕಷ್ಟದಲ್ಲಿರುವ ಸಣ್ಣ ಪತ್ರಿಕೆ ಸಂಪಾದಕರು, ವರದಿಗಾರರು, ಸಿಬ್ಬಂದಿಗಳಿಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ನೀಡಿ, ಸಂಕಷ್ಟದಿಂದ ಪಾರು ಮಾಡುವಂತೆ ಆಗ್ರಹಿಸಿರುವ ಅವರು, ಕೂಡಲೇ ಸಣ್ಣ ಪತ್ರಿಕೆಗಳಿಗೆ ವಿಶೇಷ ಜಾಹೀರಾತುಗಳನ್ನು ನೀಡುವುದರ ಜೊತೆಗೆ ತಲಾ ಹತ್ತು ಸಾವಿರ ರೂ.ಗಳ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.