ಸಿಂಘು ಗಡಿಯಲ್ಲಿ ವರದಿ ಮಾಡುತ್ತಿದ್ದ ಮಂದೀಪ್ ಪೂನಿಯಾ ಮತ್ತು ಧರ್ಮೇಂಧರ್ ಸಿಂಗ್ ಎಂಬ ಪತ್ರಕರ್ತರನ್ನು ಪೊಲೀಸರು ಬಲವಂತವಾಗಿ ಬಂಧಿಸಿರುವುದರ ವಿರುದ್ಧ ರೈತರು ಮತ್ತು ಪತ್ರಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾನ್ ಪತ್ರಿಕೆಯ ವರದಿಗಾರ ಮಂದೀಪ್ ಪೂನಿಯಾರವರನ್ನು ಪೊಲೀಸರು ಹಲ್ಲೆ ನಡೆಸಿ ಬಂಧಿಸಿದ್ದಾರೆ. ಅವರು ಬಿಜೆಪಿ ಮತ್ತು ಪೊಲೀಸರ ನಡುವಿನ ಒಳ ಒಪ್ಪಂದಗಳನ್ನು ಫೇಸ್‌ಬುಕ್ ಲೈವ್ ನಲ್ಲಿ ವಿವರಿಸುತ್ತಿದ್ದರು. ದೆಹಲಿ ಪೊಲೀಸರ ಕಾನೂನುಬಾಹಿರ ಚಟುವಟಿಕೆಗಳನ್ನು ವರದಿ ಮಾಡುತ್ತಿದ್ದರು. ಹಾಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಎಂದು ಕಿಸಾನ್ ಏಕ್ತಾ ಮೋರ್ಚಾ ಟ್ವೀಟ್ ಮಾಡಿದೆ.
ಬಂಧನಕ್ಕೂ ಮುನ್ನ ಪತ್ರಕರ್ತ ಮಂದೀಪ್ ಪುನಿಯಾ ’ಬಿಜೆಪಿಯು ದೆಹಲಿ ಪೊಲೀಸರೊಂದಿಗೆ ಸೇರಿಕೊಂಡು ಹಿಂಸಾಚಾರ ನಡೆಸಲು ಸಿದ್ದತೆ ನಡೆಸಿದೆ ಎಂದು ಆರೋಪಿಸಿದ್ದರು. ಇದರ ಕುರಿತು ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧನಗಳನ್ನು ವಿರೋಧಿಸಿ ದೆಹಲಿ ಪೊಲೀಸ್ ಮುಖ್ಯ ಕಚೇರಿ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸತ್ಯಕ್ಕೆ ಹೆದರುವವರು ನಿಜವಾದ ಪತ್ರಕರ್ತರನ್ನು ಬಂಧಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ರೀತಿಯಲ್ಲಿ ಧರ್ಮೇಂಧರ್ ಸಿಂಗ್ ಎಂಬುವವರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದು ಆ ನಂತರ ಆತ ತನ್ನ ಗುರುತಿನ ಚೀಟಿ ತೋರಿಸಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ನ್ಯೂಸ್‌ಕ್ಲಿಕ್ ವರದಿ ಮಾಡಿದೆ.
ಸಿಂಘು ಗಡಿಯಲ್ಲಿ ದೆಹಲಿಯ ಭಾಗಕ್ಕೆ ಬರುವ ಮತ್ತು ಕೆಲವೇ ಸಾವಿರ ಸಂಖ್ಯೆಯಲ್ಲಿರುವ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ರೈತರು ಪ್ರತಿಭಟನೆ ನಡೆಸುವ ಸ್ಥಳಕ್ಕೆ 50-60 ಜನರ ಗುಂಪೊಂದು ಘೋಷಣೆ ಕೂಗುತ್ತಾ ಬಂದಿತು. 5000-6000 ಸಂಖ್ಯೆಯಲ್ಲಿ ಪೊಲೀಸರು ನೆರೆದಿದ್ದರೂ ಅವರು ಪ್ರತಿಭಟನಾಕಾರರನ್ನು ಒಳಕೆ ಬಿಟ್ಟರು. ನಂತರ ಅವರು ರೈತರ ವಿರುದ್ಧ ಘೋಷಣೆ ಕೂಗಿದ್ದಲ್ಲದೆ ಕಲ್ಲು ತೂರಾಟ ನಡೆಸಿದರು. ಪೊಲೀಸರು ಮುಖ ಪ್ರೇಕ್ಷಕರಾಗಿದ್ದರು ಎಂದು ಮಂದೀಪ್ ಪುನಿಯಾ ಆರೋಪಿಸಿದ್ದರು.
ಈ ಕಾರಣಕ್ಕಾಗಿಯೇ ಅವರ ಮೇಲೆ ಹಲ್ಲೆ ನಡೆಸಿ ಬಂಧಿಸಲಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಆದರೆ ಸಿಂಘು ಗಡಿಯಲ್ಲಿನ ಸ್ಟೇಷನ್ ಹೌಸ್ ಆಫೀಸರ್ ಜೊತೆ ಪತ್ರಕರ್ತ ಅನುಚಿತವಾಗಿ ವರ್ತಿಸಿದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಸೆಕ್ಷನ್ 186 (ಸಾರ್ವಜನಿಕ ಕಾರ್ಯಗಳನ್ನು ನಿರ್ವಹಿಸುವಲ್ಲಿ ಸಾರ್ವಜನಿಕ ಸೇವಕರಿಗೆ ಅಡ್ಡಿಯುಂಟುಮಾಡುವುದು), 332 (ಸಾರ್ವಜನಿಕ ಸೇವಕನನ್ನು ಕರ್ತವ್ಯದಿಂದ ತಡೆಯಲು ಸ್ವಯಂಪ್ರೇರಣೆಯಿಂದ ನೋವನ್ನುಂಟು ಮಾಡುವುದು) ಅಡಿಯಲ್ಲಿ ಮಂದೀಪ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನಾವು ಸಾಧ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಕಾರವಾನ್ ನಿಯತಕಾಲಿಕೆಯ ರಾಜಕೀಯ ಸಂಪಾದಕ ಹರ್ತೋಶ್ ಸಿಂಗ್ ಬಾಲ್ ಟ್ವೀಟ್ ಮಾಡಿದ್ದಾರೆ.