Breaking News

ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ : ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಬಹು ಚರ್ಚಿತವಾಗುತ್ತಿರುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ಸುಗ್ರೀವಾಜ್ಞೆ- 2020ನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಹೋರಾಟಗಾರ- ಪತ್ರಕರ್ತ ನಾಗರಾಜ ಹೊಂಗಲ್ ಅವರು ದಾಖಲಿಸಿರುವ ಮೊಕದ್ದಮೆಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ ಎ ಓಕಾ ಮತ್ತು ಅಶೋಕ ಕಿಣಗಿ ಅವರನ್ನು ಒಳಗೊಂಡ ಪೀಠ ಈ ಬಗ್ಗೆ ಸೆಪ್ಟೆಂಬರ್ 18ರ ಒಳಗಾಗಿ ತನ್ನ ನಿಲುವನ್ನು ತಿಳಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತು. 


ಕಳೆದ ತಿಂಗಳು 13ರಂದು ಅಧಿಸೂಚಿತಗೊಂಡಿರುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ಸುಗ್ರೀವಾಜ್ಞೆ- 2020, ಕೃಷಿಕರಲ್ಲದವರು ಜಮೀನು ಖರೀದಿಸಲು ಇದ್ದ ನಿಬಂಧನೆಗಳನ್ನು ತೆಗೆದು ಹಾಕಿದ್ದು ಏಕಪಕ್ಷೀಯ ನಿರ್ಧಾರವಾಗಿದೆ. ಇದು ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯುಂಟು ಮಾಡಿದೆ. ಸಂವಿಧಾನ ದತ್ತ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ. ಸಂವಿಧಾನವು 14, 19 ಮತ್ತು 21ನೇ ಕಲಮುಗಳಲ್ಲಿ ಉಲ್ಲೇಖಿಸಿರುವ ಸಮಾನತೆ, ಸ್ವಾತಂತ್ರ್ಯದ ಹಕ್ಕುಗಳಿಗೆ ಧಕ್ಕೆ ಬಂದಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಯಾವುದೇ ತಿದ್ದುಪಡಿ ಕಾಯ್ದೆಯಾಗಬೇಕಾದರೆ ಶಾಸನ ಸಭೆಗಳಲ್ಲಿ ಸಮಗ್ರ ಚರ್ಚೆಯಾಗಿ ಒಮ್ಮತ ಇಲ್ಲವೇ ಬಹುಮತವಾದರೂ ಮೂಡಿ ಬರಬೇಕು. ಆದರೆ ಸದರಿ ಸುಗ್ರೀವಾಜ್ಞೆಯನ್ನು ಶಾಸನ ಸಭೆಯಲ್ಲಿ ಚರ್ಚಿಸದೇ ತರಾತುರಿಯಲ್ಲಿ ಅಧಿಸೂಚಿತಗೊಳಿಸಿರುವ ಕ್ರಮದ ಹಿಂದಿನ ಉದ್ದೇಶ ಸಾರ್ವಜನಿಕ ಹಿತಾಸಕ್ತಿಗೆ ಭಂಗ ತಂದಿದೆ ಎಂದೂ ಹೇಳಲಾಗಿದೆ. ಕರ್ನಾಟಕ ಭೂ ಸುಧಾರಣೆ ಶಾಸನ- 1961ಕ್ಕೆ ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಗಳಿಂದಾಗಿ ಮೂಲ ಶಾಸನದಲ್ಲಿನ ಸೆಕ್ಷನ್ 63, 79 (ಎ), 79 (ಬಿ) ಮತ್ತು 79 (ಸಿ)ಗಳು ನಿರಸನಗೊಂಡಿದ್ದು, ಕೃಷಿ ಜಮೀನು ಖರೀದಿಗೆ ಇದ್ದ ನಿರ್ಬಂಧಗಳೆಲ್ಲವೂ ತೆರವಾಗಿವೆ. 1961ರ ಕಾಯ್ದೆ ಪ್ರಕಾರ ಒಬ್ಬ ವ್ಯಕ್ತಿ 54 ಎಕರೆ ಮತ್ತು ಕುಟುಂಬ 108 ಎಕರೆ ಜಮೀನನ್ನು ಹೊಂದಬಹುದಾಗಿತ್ತು. ಸುಗ್ರೀವಾಜ್ಞೆ ಮೂಲಕ ಜಾರಿಗೊಂಡ ಕಾಯ್ದೆ ಪ್ರಕಾರ ಒಬ್ಬ ವ್ಯಕ್ತಿ ಇನ್ನು ಮುಂದೆ 108 ಎಕರೆ ಹೊಂದಬಹುದಾಗಿದ್ದು ಒಂದು ಕುಟುಂಬ 432 ಎಕರೆ ಜಮೀನು ಹೊಂದಬಹುದಾಗಿದೆ.

ಇದು ಬಂಡವಾಳಶಾಹಿ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲಿದ್ದು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ರೈತ ವರ್ಗವನ್ನು ನಾಶ ಮಾಡಲಿದೆ. ದೇಶದ ಕೃಷಿ ಉತ್ತನ್ನದ ಮೆಲೆ ದುಷ್ಟರಿಣಾಮ ಬೀರವುದು. ಇದರಿಂದಾಗಿ ಸಂವಿಧಾನದಲ್ಲಿ ಉಲ್ಲೇಖಿತವಾದ ಸಮಾಜವಾದದ ಮೂಲ ಪರಿಕಲ್ಪನೆಗೆ ಕೊಡಲಿ ಪೆಟ್ಟು ಬಿದ್ದಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. 
ಅರ್ಜಿದಾರರ ಪರ ನ್ಯಾಯವಾದಿ ರವೀಂದ್ರ ಡಿ.ಕೆ. ಅವರು ವಕಾಲತ್ತು ವಹಿಸಿದ್ದು, ಪ್ರಕರಣದಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.