ಬೆಂಗಳೂರು: ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನೇತ್ರ ವೈದ್ಯನಾಗಿ ಕೆಲಸ ಮಾಡ್ತಿದ್ದ ಶಂಕಿತ ಉಗ್ರ ಅಬ್ದುಲ್ ರೆಹಮಾನ್ನನ್ನು ಎನ್‌ಐಎ ಮೊನ್ನೆ ಬಂಧಿಸಿದೆ. ಈತನನ್ನು ಅರೆಸ್ಟ್ ಮಾಡಿದ್ದು ಹೇಗೆ ಅನ್ನೋದೇ ರೋಚಕ ಕಥೆ. ಈ ಕುರಿತಾದ ಇಂಟರೆಸ್ಟಿಂಗ್ ಹಾಗೂ ಸ್ಫೋಟಕ ಮಾಹಿತಿಗಳು ಆರೋಪಿಯ ವಿಚಾರಣೆಯಿಂದ ಬಹಿರಂಗವಾಗಿದೆ.
ಸಿರಿಯಾ ಮೇಲಿನ ದಾಳಿ ವೇಳೆ, ಮೆಡಿಸಿನ್ಸ್ ಕೊಟ್ಟ ಸುಳಿವು
ಅಬ್ದುಲ್ ರೆಹಮಾನ್ ಬಗ್ಗೆ ಭಾರತಕ್ಕೆ ಮಾಹಿತಿ ಸಿಕ್ಕಿದ್ದು ಸಿರಿಯಾದಿಂದ. 2018ರಲ್ಲಿ ಅಮೆರಿಕಾ ಸಿರಿಯಾ ಮೇಲೆ ದಾಳಿ ನಡೆಸಿದ ವೇಳೆ, ಅಬ್ದುಲ್ ರೆಹಮಾನ್ ಕಳುಹಿಸಿದ್ದ ಮೆಡಿಸಿನ್ಗಳು ಅಲ್ಲಿ ಪತ್ತೆಯಾಗಿದ್ವು. ಅಲ್ಲಿ ಕೆಲ ದಾಖಲೆಗಳು ಹಾಗೂ ಮೆಡಿಸಿನ್ಗಳ ಲೇಬಲ್ಗಳನ್ನ ಅಮೆರಿಕಾ ಸೇನೆ ಸಂಗ್ರಹಿಸಿತ್ತು. ಮೆಡಿಸಿನ್ಗಳು ಭಾರತದಿಂದ ರವಾನೆಯಾಗಿದೆ ಅನ್ನೋ ಮಾಹಿತಿಯನ್ನ ಅಮೆರಿಕಾ ಭಾರತಕ್ಕೆ ನೀಡಿತ್ತು.
ಇದರ ರಹಸ್ಯ ಬೆನ್ನು ಹತ್ತಿದ ಎನ್‌ಐಎ ವಿಶೇಷ ತಂಡ ಮತ್ತು ಗುಪ್ತಚರ ಇಲಾಖೆಗೆ, ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್ಕೆಪಿ) ಸಂಘಟನೆಯ ಪಾತ್ರದ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಗುಪ್ತಚರ ಇಲಾಖೆ ಹಾಗೂ ಎನ್‌ಐಎ ಕೈ ಜೋಡಿಸಿ, ಅಬ್ದುಲ್ ರಹಮಾನ್ನ ಜಾಡು ಪತ್ತೆ ಮಾಡುವಲ್ಲಿ ಯಶಸ್ವಿಯಾದವು.
ಡಾಕ್ಟರ್ ಬ್ರೇವ್ ಎಂದು ಕರೆಸಿಕೊಳ್ತಿದ್ದ ರೆಹಮಾನ್
ಮೊದಲು ಉಗ್ರರ ಸಂಪರ್ಕ ಹೊಂದಿದ ಕಾಶ್ಮಿರ ಮೂಲದ ಜಾಹನೇಬ್ ದಂಪತಿಯನ್ನ ಬಂಧಿಸಿ ವಿಚಾರಣೆ ಮಾಡಿದಾಗ, ಅಬ್ದುಲ್ ರಹಮಾನ್ನ ಸುಳಿವು ಸಿಕ್ಕಿತ್ತು. ದೇಶದೆಲ್ಲೆಡೆ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ವೈದ್ಯ ರೆಹಮಾನ್, ತನ್ನ ನಿಜವಾದ ಹೆಸರನ್ನ ಮುಚ್ಚಿಟ್ಟು ಉಗ್ರರ ಜೊತೆ ವ್ಯವಹಾರ ನಡೆಸುತ್ತಿದ್ದ. ಸೋಷಿಯಲ್ ಮಿಡಿಯದಲ್ಲಿ ಡಾಕ್ಟರ್ ಬ್ರೇವ್ ಗುಪ್ತಾ ಎಂಬ ಹೆಸರಿನಲ್ಲಿ, ಸಮಾನ್ಯ ಜನರ ಮುಂದೆ ತಾನು ನೇತ್ರ ತಜ್ಞ ಅಂತಾ ಗುರುತಿಸಿಕೊಂಡಿದ್ದ. ಆದರೆ ಉಗ್ರರು ಇವನಿಗೆ ಡಾಕ್ಟರ್ ಬ್ರೇವ್ ಅಂತಿದ್ದರಂತೆ. ಅಲ್ಲದೇ ಈತ ತನ್ನನ್ನ ಡಾಕ್ಟರ್ ಬ್ರೇವ್ ಬಸವನಗುಡಿ ಎನ್ನುತ್ತಿದ್ದನಂತೆ. ಈ ಬಗ್ಗೆ ಸ್ವತಃ ಎನ್‌ಐಎ ಅಧಿಕಾರಿಗಳ ಮುಂದೆ ಆರೋಪಿಯೇ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಇನ್ನೂ ಕೆಲ ದಿನಗಳಲ್ಲಿ ಈತನ ಆಯಪ್ಗಳು ರೆಡಿಯಾಗುತ್ತಿದ್ದವು. ಆಷ್ಟರಲ್ಲಿ ತನ್ನನ್ನು ಬಂಧಿಸಿರೋದಾಗಿ ಸ್ವತಃ ಆತನೇ ಹೇಳಿದ್ದಾನೆ ಅಂತ ತಿಳಿದುಬಂದಿದೆ. ಸ್ಯಾಟಲೈಟ್ ಕಾಲ್ಗಳನ್ನ ಮೊಬೈಲ್ನಲ್ಲಿ ಸ್ವೀಕರಿಸುವ ಪ್ಲಾನ್ ಇಟ್ಟುಕೊಂಡು ಈತ ಆಯಪ್ ತಯಾರಿಸುತ್ತಿದ್ದ ಎನ್ನಲಾಗಿದೆ. ಸದ್ಯ ದೆಹಲಿಯ ಎನ್‌ಐಎ ಟೀಂ ಅಬ್ದುಲ್ ರಹಮಾನ್ನ್ನ ತೀವ್ರ ವಿಚಾರಣೆಗೊಳಪಡಿಸಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.