ಒಂದು ಕಡೆ ಕೆಲವರು ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದಾರೆ. ಆದರೆ ತೆಲಂಗಾಣದಲ್ಲಿ ಮಾನವೀಯತೆಯು ಇನ್ನೂ ಜೀವಂತವಾಗಿದೆ ಅನ್ನುವುದಕ್ಕೆ ಸಾಕ್ಷಿಯಾದ ಘಟನೆಯೊಂದು ನಡೆದಿದೆ.
ಕೋವಿಡ್ ನಿಂದ ಮೃತಪಟ್ಟ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಮುಸ್ಲಿಂ ಸಹೋದರರು ನಡೆಸಿಕೊಟ್ಟಿರುವ ಘಟನೆ ತೆಲಂಗಾಣದ ಪೆಡ್ಡಾ ಕೊಡಪಾಗಲ್ ಮಂಡಲದ ಕೇಟೆಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯನ್ನು ಮೊಘುಲಿಯಾ ಎಂದು ಗುರುತಿಸಲಾಗಿದೆ. ಈ ವ್ಯಕ್ತಿಯು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಆನಂತರ ಇವರಿಗೆ ಕೋವಿಡ್ ಸೋಂಕು ದೃಢ ಪಟ್ಟಿದ್ದು ಇವರನ್ನು ಭನಸುವಾಡದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೊಘುಲಿಯಾ ಸಾವನ್ನಪ್ಪಿದ್ದರು.

ಕೋವಿಡ್ ಸೋಂಕು ತಗುಲಿ ಮೊಘುಲಿಯಾ ಸಾವನ್ನಪ್ಪಿದ್ದರಿಂದ ಅವರ ಕುಟುಂಬದವರು ಮೃತ ದೇಹವನ್ನು ಆಸ್ಪತ್ರೆಯಿಂದ ಕೊಂಡೊಯ್ಯಲು ಮತ್ತು ಅಂತ್ಯ ಸಂಸ್ಕಾರ ಮಾಡಲು ಮುಂದಾಗಲಿಲ್ಲ. ಇವರು ಕೋವಿಡ್ ಗೆ ಹೆದರಿ ಅಂತ್ಯ ಸಂಸ್ಕಾರಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿದೆ.
ಇದನ್ನು ಅರಿತ ಶಫಿ ಮತ್ತು ಅಲಿ ಎಂಬ ಇಬ್ಬರು ಮುಸಲ್ಮಾನ ಬಾಂಧವರು ಉಪವಾಸದ ನಡುವೆಯೂ ಮೊಘುಲಿಯಾ ಅವರ ಮೃತ ದೇಹವನ್ನು ಭನಸುವಾಡ ಪ್ರದೇಶದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದಾರೆ.
ಶಫಿ ಮತ್ತು ಅಲಿ ಈ ಇಬ್ಬರಿಗೂ ಮೃತಪಟ್ಟ ಮೊಘುಲಿಯಾನ ಪರಿಚಯವೇ ಇರಲಿಲ್ಲ.ಯಾವುದೇ ರಕ್ತ ಸಂಬಂಧವೂ ಇಲ್ಲ. ಆದರೆ ಕುಟುಂಬದವರು ಮುಂದೆ ಬರದ ಕಾರಣ ಮಾನವೀಯ ದೃಷ್ಟಿಯಿಂದ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇವರ ಕಾರ್ಯ ಇದೀಗ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಮಾನವೀಯತೆ ಸತ್ತಿಲ್ಲ. ಇನ್ನೂ ಕೂಡ ಜೀವಂತವಿದೆ ಎಂಬುದನ್ನು ಈ ಇಬ್ಬರು ಮುಸ್ಲಿಂ ಸಹೋದರರು ತೋರಿಸಿಕೊಟ್ಟಿದ್ದಾರೆ.