ಯಾದಗಿರಿ | ಆರೋಗ್ಯ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ರಾಜ್ಯದ ಎಲ್ಲಾ ರೀತಿಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳ ಕುರಿತು ಸಮಗ್ರ ಮಾನವ ಸಂಪನ್ಮೂಲ ನೀತಿಯ ಸಮಿತಿಯನ್ನು ರಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸದರಿ ಸಮಿತಿಯ ನೇತೃತ್ವವನ್ನು ಪಿ ಎನ್ ಶ್ರೀನಿವಾಸಾಚಾರಿ, ನಿವೃತ್ತ ಐಎಎಸ್ ಅಧಿಕಾರಿ ರವರು ವಹಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಆರೋಗ್ಯ & ವೈ. ಶಿ. ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರ ಸಂಘದ (ಭಾರತೀಯ ಮಜ್ದೂರ್ ಸಂಘದ ಸಂಯೋಜಿತ ಸಂಘಟನೆ) ವತಿಯಿಂದ ಸಂಘದ ರಾಜ್ಯ ಅಧ್ಯಕ್ಷರಾದ ವಿಶ್ವಾರಾಧ್ಯ ಯಮೋಜಿ ತಿಳಿಸಿದರು.
ಅದಲ್ಲದೆ ಪ್ರಮುಖವಾಗಿ ಮಾನ್ಯ ವಿಧಾನ ಪರಿಷತ್ ಶಾಸಕರಾದ ಹಾಗೂ ನಮ್ಮ ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್ ರವರು ಈ ಸಮಿತಿಯಲ್ಲಿ ಸ್ಥಾನ ನೀಡಿರುವುದು ಎಲ್ಲಾ ನೌಕರರಿಗೆ ಸಂದ ಗೌರವ ಮತ ಸಮಿತಿಯ ಬಗ್ಗೆ ಹೆಚ್ಚಿನ ಭರವಸೆ ಮೂಡಿದೆ ಎಂದು ತಿಳಿಸಿದರು. ನಮ್ಮ ಸಂಘದ ವತಿಯಿಂದ ಕಳೆದ ಒಂದು ತಿಂಗಳಿಂದ ಬೇಡಿಕೆಗಳ ಈಡೇರಿಕೆಗೆ ರೂಪರೇಷೆಗಳ ತಯಾರಿಸಿ ಸಿದ್ಧತೆ ಮಾಡಿಕೊಂಡಿದ್ದು. ಸರ್ಕಾರದ ಗಮನ ಸೆಳೆಯಲು ವಿಶಿಷ್ಟ ಹಾಗೂ ವಿವಿಧ ರೀತಿಯಲ್ಲಿ ಇಲ್ಲಿಯವರೆಗೆ ಹೋರಾಟಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಕಪ್ಪು ಬಟ್ಟೆ/ ಪಟ್ಟಿ ಧರಣಿ ಪ್ರತಿಭಟನೆ, ಅನಿರ್ದಿಷ್ಟಾವಧಿ (ಅಸಹಕಾರ ಚಳುವಳಿ) ಮುಷ್ಕರಕ್ಕೆ ಕರೆ ಅನಿವಾರ್ಯವಾಗಿ ನೀಡಬೇಕಾಯಿತು ಎಂದರು.
ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಮಟ್ಟದಲ್ಲಿ ಉನ್ನತ ಸಮಿತಿ ರಚನೆ ಮಾಡಿರುವುದಾಗಿ ಮಾನ್ಯ ಆರೋಗ್ಯ ಸಚಿವರು ತಮ್ಮ ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ಮತ್ತು ಈ ಬಗ್ಗೆ ಮುಷ್ಕರವನ್ನು ಹಿಂಪಡೆಯಲು ವಿನಂತಿಯನ್ನು ಮಾಡಿದ್ದು ಸರಿಯಷ್ಟೇ. ಆದರೆ ನಮ್ಮ ಸಂಘಟನೆಗೆ ಸಮಿತಿ ರಚನೆ ಮಾಡಿರುವ ಬಗ್ಗೆ ಅಧಿಕೃತವಾಗಿ ಲಿಖಿತವಾಗಿ ಆದೇಶ ಪ್ರತಿಯನ್ನು ನೀಡಿದ್ದಲ್ಲಿ ಮಾತ್ರ ಮುಷ್ಕರವನ್ನು ಹಿಂಪಡೆಯಲು ಸಂಘದ ಪ್ರಮುಖ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಲಾಖೆಗೆ ಮತ್ತು ಅಧಿಕಾರಿಗಳಿಗೆ ತಿಳಿಸಲಾಗಿತ್ತು.
ಅದರಂತೆ ಸನ್ಮಾನ್ಯ ಮುಖ್ಯ ಮಂತ್ರಿಗಳು ಮಧ್ಯಪ್ರವೇಶ ಮಾಡಿ ಆರೋಗ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಉನ್ನತ ಅಧಿಕಾರಿಗಳಿಗೆ ಸಮಿತಿ ರಚನೆ ಬಗ್ಗೆ ಸೂಚನೆ ನೀಡಿದ್ದಾರೆ ಮತ್ತು ಮಾನ್ಯ ಆರೋಗ್ಯ ಸಚಿವರು ವಿಶೇಷ ಆಸಕ್ತಿವಹಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಅನುಮೋದನೆ ನೀಡಿದಂತೆ ನಮಗೆ ದಿನಾಂಕ 3.6.2020 ರ ತಡ ರಾತ್ರಿ ಸಮಿತಿ ರಚನೆ ಮಾಡಿರುವ ಬಗ್ಗೆ ಲಿಖಿತವಾಗಿ ಆದೇಶ ಪ್ರತಿ ದೊರಕಿದ್ದು, ಇದು ಮೊದಲನೆಯ ಜಯವಾಗಿರುತ್ತದೆ. ಈ ಯಶಸ್ಸು ಸಂಘಟನೆಯ ಹಾಗೂ ಎಲ್ಲಾ ಪದಾಧಿಕಾರಿಗಳ, ನೌಕರರ ಸತತ ಪ್ರಯತ್ನದ ಫಲ ಎಂದು ಸಂಘದ (ಕ.ರಾ.ಆ.ಗು.ಹೊ.ನೌ.ಸಂಘ) ಹಾಗೂ ನೌಕರರ ಪರವಾಗಿ ಸಂಘದ ರಾಜ್ಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Check Also
test
test