“ಪಶ್ಚಿಮಬಂಗಾಳ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಸ್ಪರ್ಧಿಸಿದರೆ ಅದು ಬಿಜೆಪಿಗೆ ನೆರವಾಗಲಿದೆ. ಈ ಮೂಲಕ ನಾವು ಚುನಾವಣೆಯನ್ನು ಗೆಲ್ಲುತ್ತೇವೆ” ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ಓವೈಸಿ ಉತ್ತರಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸುವ ಕುರಿತು ಪ್ರಶ್ನಿಸಿದಾಗ, “ಇದು ದೇವರ ಅನುಗ್ರಹ. ದೇವರು ಅವರಿಗೆ ಶಕ್ತಿ ನೀಡಲಿ. ಅವರು ನಮಗೆ ಬಿಹಾರದಲ್ಲಿ ಸಹಾಯ ಮಾಡಿದ್ದರು. ಉತ್ತರಪ್ರದೇಶ ಹಾಗೂ ಪಶ್ಚಿಮಬಂಗಾಳದಲ್ಲೂ ಗೆಲ್ಲಲು ಅವರು ನಮಗೆ ಸಹಾಯ ಮಾಡಲಿದ್ದಾರೆ” ಎಂದು ಉನ್ನಾವೊ ಕ್ಷೇತ್ರದ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಬಿಜೆಪಿ ಸಂಸದನ ಈ ಹೇಳಿಕೆಯ ನಂತರ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಓವೈಸಿ ಪಕ್ಷವನ್ನು ಬಿಜೆಪಿಯ ‘ಬೀ ಟೀಮ್’ ಎಂದು ಕರೆದಿದ್ದಾರೆ. ಈ ಹಿಂದೆಯೂ ಎಐಎಂಐಎಂ ಪಕ್ಷವು ಇದೇ ರೀತಿಯ ಆರೋಪವನ್ನು ಎದುರಿಸಿತ್ತು. ಕಳೆದ ವರ್ಷ ನಡೆದಿದ್ದ ಬಿಹಾರ ಚುನಾವಣೆಯಲ್ಲಿ ಬಿಜೆಪಿಯ ಯಶಸ್ಸಿಗೆ ಓವೈಸಿ ಪಕ್ಷ ನೆರವಾಗಿದೆ ಎಂಬ ಮಾತು ಕೇಳಿಬಂದಿತ್ತು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಓವೈಸಿ ನೇತೃತ್ವದ ಪಕ್ಷ ಕಳೆದ ವರ್ಷ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಈ ಪಕ್ಷವು ಮುಸ್ಲಿಮರ ಮತವನ್ನು ಸೆಳೆದು ವಿರೋಧ ಪಕ್ಷಗಳ ಸೋಲಿಗೆ ಕಾರಣವಾಗಿತ್ತು. ಈ ಮೂಲಕ ಎನ್‍ಡಿಎ ಗೆಲ್ಲಲು ನೆರವಾಗಿತ್ತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.