Breaking News

ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ: ಕತ್ತೆ, ಕುದುರೆ ಮೊರೆ ಹೋದ ಜನತೆ

ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸಿದ ಕೆಲವೇ ಗಂಟೆಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಕಾಣುತ್ತಿದ್ದಂತೆ ಜನಸಾಮಾನ್ಯರನ್ನು ತಬ್ಬಿಬ್ಬುಗೊಳಿಸಿದೆ. ಗ್ರಾಮೀಣ ಪ್ರದೇಶದ ಜನರು ಬೈಕ್, ಟಿವಿಎಸ್ ಗಳನ್ನು ಮೂಲೆಗೆ ತಳ್ಳಿ ಸಂಚಾರಕ್ಕೆ ಕುದುರೆ ಮತ್ತು ಕತ್ತೆ ಬಳಸುತ್ತಿರುವುದು ಬೆಳಕಿಗೆ ಬಂದಿದೆ. ತೈಲೋತ್ಪನ್ನಗಳ ಬೆಲೆ ಲೀಟರ್ ಗೆ ನೂರು ರೂಗಳತ್ತ ಗಗನಮುಖಿಯಾಗಿ ಸಾಗುತ್ತಿದ್ದಂತೆಯೇ ಈ ಸಂಚಾರಿ ವ್ಯಾಪಾರಿಗಳು ಈ ಮಾರ್ಗ ಹಿಡಿದಿದ್ದಾರೆ. ಮತ್ತೊಂದು ಕಡೆ ದುಬಾರಿ ಬೆಲೆಗಳಿಂದಾಗಿ ರೈತರು ಬಾಣಲೆಯಿಂದ ಬೆಂಕಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಹಿಂದಿನ ಕಾಲದಲ್ಲಿ ಸಂಚಾರಕ್ಕೆ ಬಳಸುತ್ತಿದ್ದ ಪರಿಸರಸ್ನೇಹಿ ಪ್ರಾಣಿಗಳ ಮೇಲೆಯೇ ಯುವಕರ ಸವಾರಿ ಸಾಗಿದೆ. ಇದಕ್ಕೆ ನಿದರ್ಶನವೆಂಬಂತೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕು ವೆಂಕಟಾಪುರದಲ್ಲಿ ಇಬ್ಬರು ಯುವಕರು ಕತ್ತೆ – ಕುದುರೆ ಮೇಲೆ ಪ್ರಯಾಣ ಬೆಳೆಸಿ ದುಬಾರಿ ಜೀವನ ನಡೆಸುತ್ತಿರುವ ಸಂಕಟ ಸಮಯದಲ್ಲಿ ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ಬಜೆಟ್ ಜನ ಸಾಮಾನ್ಯರಿಗೆ ಹೊರೆಯಾಗಿದೆ, ನಿತ್ಯವೂ ಹಳ್ಳಿಗಳಿಂದ ಪಟ್ಟಣಕ್ಕೆ ದ್ವಿಚಕ್ರ ವಾಹನಗಳಲ್ಲಿ ಹೋಗುವುದು ದುಸ್ಥರ ಎಂಬುದನ್ನು ಸಾರಿ ಹೇಳುತ್ತಿದ್ದಾರೆ.

ವೆಂಕಟಮ್ಮನಹಳ್ಳಿಯ 40 ವರ್ಷದ ಸೋಮಶೇಖರ್ ದಿನಸಿ ವ್ಯಾಪಾರಿ. ಹಳ್ಳಿಹಳ್ಳಿಗೆ ಟಿವಿಎಸ್ ಎಕ್ಸ್ ಎಲ್ ವಾಹನದಲ್ಲಿ ತೆರಳಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ದಿನಕ್ಕೆ ಹತ್ತಾರು ಹಳ್ಳಿಗಳನ್ನು ತಿರುಗಿ ವ್ಯಾಪಾರ ಮಾಡಿ ದಿನಕ್ಕೆ 100 ರೂ ಗಳಿಸುತ್ತಿದ್ದರು. ಪೆಟ್ರೋಲ್ ಬೆಲೆ ಜಾಸ್ತಿಯಾಗುತ್ತಿದ್ದಂತೆಯೇ ಬಂದ ಲಾಭದ ಹಣ ಪೂರ ಪೆಟ್ರೋಲ್ ಖರ್ಚಿಗೆ ಸರಿಯಾಗುತ್ತಿತ್ತು. ಇದನ್ನು ಮನಗಂಡ ಸೋಮಶೇಖರ್ ಸಂಚಾರಿ ವ್ಯಾಪಾರಕ್ಕೆ ಕುದುರೆ ಬಳಕೆ ಮಾಡುತ್ತಿದ್ದಾರೆ. ಒಮ್ಮೆ ಹುಲ್ಲು ಖರೀದಿ ಮಾಡಿದರೆ ಆರು ತಿಂಗಳಿಗಾಗುವಷ್ಟು ಸಿಗುತ್ತದೆ. ಇದಕ್ಕೆ ಹೆಚ್ಚೆಂದರೆ 1000 ರೂಪಾಯಿ ವೆಚ್ಚ ತಗಲುತ್ತದೆ. ಕುದುರೆ ತೆಗೆದುಕೊಂಡು ಎರಡು ತಿಂಗಳಾಗಿದೆ. ಹೆಚ್ಚು ಖರ್ಚು ಬರುತ್ತಿಲ್ಲ. ಇದುವರೆಗೆ ಪೆಟ್ರೋಲ್ ಗೆ ವೆಚ್ಚ ಮಾಡುತ್ತಿದ್ದ ಹಣ ಉಳಿಯುತ್ತಿದೆ. ಗೋಣಿಹಳ್ಳಿ, ಪೆನಗೊಂಡೆ, ತಿರುಮಣಿ ಹೀಗೆ ಹಲವು ಹಳ್ಳಿಗಳನ್ನು ತಿರುಗುತ್ತೇನೆ. ಒಂದಷ್ಟು ಹಣ ಉಳಿಯುವಂತೆ ಆಗಿದೆ ಎಂದು ಸೋಮಶೇಖರ್ ತಿಳಿಸುತ್ತಾರೆ.

ರಾಮಲಿಂಗಯ್ಯ ಹೆಚ್ಚು ತಿಳುವಳಿಕೆ ಇಲ್ಲ. ಈತನೂ ಕೂಡ ಸಂಚಾರಿ ವ್ಯಾಪಾರಿ. ಬಟ್ಟೆ ವ್ಯಾಪಾರಕ್ಕೆ ಕತ್ತೆ ಖರೀದಿ ಮಾಡಿದ್ದು ನಿತ್ಯವೂ ಕತ್ತೆಯ ಮೇಲೆ ಬಟ್ಟೆಗಳನ್ನು ಹೇರಿಕೊಂಡು ಹೋಗಿ ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಸೈಕಲ್ ಮೇಲೆ ಹೋಗುತ್ತಿದ್ದರು. ಅದು ತುಳಿಯಲು ಆಗದೆ ಹಳೆಯ ಟಿವಿಎಸ್ ಬಳಸಿದರು. ನಿತ್ಯವೂ ಪೆಟ್ರೋಲ್ ಗೆ ಹಣ ಸುರಿಯುತ್ತಿದ್ದರು. ಬರುವ ಸಣ್ಣ ಲಾಭಾಂಶವೂ ಪೆಟ್ರೋಲ್ ಗೆ ಆಗುತ್ತಿತ್ತು. ಇದರಿಂದ ಏನೂ ಉಳಿಯುತ್ತಿರಲಿಲ್ಲ. ದಿನಕ್ಕೆ 800 ರೂ ಬಟ್ಟೆ ವ್ಯಾಪಾರ ಮಾಡಿದರೆ ಬಂದ ಬಹುತೇಕ ಹಣ ಪೆಟ್ರೋಲ್ ಗೆ ಖರ್ಚಾಗುತ್ತಿತ್ತು. ಹಾಗಾಗಿ ಕತ್ತೆ ಖರೀದಿ ಮಾಡಿರುವ ರಾಮಲಿಂಗಯ್ಯ “ಈಗ ಬಟ್ಟೆ ವ್ಯಾಪಾರದಿಂದ ಸಣ್ಣ ಉಳಿತಾಯ ಮಾಡುವಂತಹ ಸ್ಥಿತಿಗೆ ಬಂದಿದೆ. ಒಮ್ಮೆ ಭತ್ತದ ಹುಲ್ಲು ಖರೀದಿಸಿದರೆ ಆರೇಳು ತಿಂಗಳು ಬರುತ್ತದೆ. ವ್ಯಾಪಾರಕ್ಕೂ ಇದು ಸಹಕಾರಿಯಾಗಿದೆ” ಎನ್ನುತ್ತಾರೆ ರಾಮಲಿಂಗಯ್ಯ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಗ್ರಾಮೀಣ ಪ್ರದೇಶದ ಮೇಲೆ ಗಾಢ ಪರಿಣಾಮ ಬೀರಿದೆ.  ಕೃಷಿಕರು ಮತ್ತು ಜನಸಾಮಾನ್ಯರನ್ನು ಕಂಗೆಡುವಂತೆ ಮಾಡಿದೆ. ಕೃಷಿ ಪರಿಕರಗಳನ್ನು ಇಳಿಕೆ ಮಾಡಿರುವ ಸರ್ಕಾರ ನಿತ್ಯವೂ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವ ತೈಲದ ಬೆಲೆ ಏರಿಕೆ ಮಾಡಿರುವುದು ಜನರ ನಡುವೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ. ಯಾವುದರ ಬೆಲೆ ಯಾವ ಕ್ಷಣದಲ್ಲಿ ಹೆಚ್ಚಳವಾಗಲಿದೆ ಎಂಬ ಆತಂಕ ರೈತರು ಮತ್ತು ಜನಸಾಮಾನ್ಯರನ್ನು ಕಾಡುತ್ತಿದೆ.

ಗ್ರಾಮೀಣ ಭಾಗದಲ್ಲಿ ಹೊಲ ಉಳಲು ಬಹುತೇಕ ರೈತರು ಟ್ರ್ಯಾಕ್ಟರ್ ಗಳನ್ನೇ ನೆಚ್ಚಿಕೊಂಡಿದ್ದಾರೆ. ಸಣ್ಣ ಹಿಡುವಳಿ, ಮಧ್ಯಮ ಹಿಡುವಳಿದಾರರು ಕೂಡ ಟ್ರ್ಯಾಕ್ಟರ್ ಮೂಲಕ ಹೊಲ ಉತ್ತುವುದು ಸಾಮಾನ್ಯವಾಗಿದೆ. ಈವರೆಗೆ ಒಂದು ಗಂಟೆ ಹೊಲ ಉಳುಮೆ ಮಾಡಲು 800 ರೂಪಾಯಿ ಇತ್ತು. ಡ್ರೈವರ್ ಬ್ಯಾಟ ಪ್ರತ್ಯೇಕ ಕೊಡಬೇಕಿತ್ತು. ಇದನ್ನೇ ಭರಿಸಲು ಬಡ ರೈತರಿಗೆ ಕಷ್ಟವಾಗಿತ್ತು. ಟ್ರ್ಯಾಕ್ಟರ್ ಗೆ ಡೀಸೆಲ್ ಹೆಚ್ಚು ಬಳಕೆ ಆಗುತ್ತದೆ ಈಗ ಬೆಲೆ ಹೆಚ್ಚಳದಿಂದ ಒಂದು ಗಂಟೆ ಹೊಲ ಉಳುಮೆ ಮಾಡಲು 1400 ರೂಗೆ ಏರಿಕೆಯಾಗಲಿದೆ. ಇಷ್ಟು ಹಣ ಕೊಡುವಷ್ಟು ರೈತರಿಗೆ ಶಕ್ತಿ ಇಲ್ಲ. ಡೀಸೆಲ್ ಬೆಲೆ ಇಳಿಕೆಯಾಗಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ರೈತರಿಗೆ ಪೂರಕವಾಗಿಲ್ಲ. ಡ್ರೈವರ್ ಬ್ಯಾಟ, ಊಟ, ಬೀಡಿ ಎಕ್ಸ್ ಟ್ರಾ ಎನ್ನುತ್ತಾರೆ ಗುಬ್ಬಿ ತಾಲೂಕಿನ ರೈತ ಮರಿಯಣ್ಣ.

ಡೀಸೆಲ್ ಬೆಲೆ ಹೆಚ್ಚಾಗಿರುವುದರಿಂದ ಬಸ್ ಪ್ರಯಾಣ ದರ ಹೆಚ್ಚಾಗುತ್ತದೆ. ಸರಕುಸಾಗಣೆ ವೆಚ್ಚವೂ ಅಧಿಕಗೊಳ್ಳುತ್ತದೆ. ಇದು ವಿವಿಧ ಬಗೆಯ ಪ್ರಯಾಣಿಕರು ಮತ್ತು ಸರಕುಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬಡವರು, ರೈತರು, ವಿದ್ಯಾರ್ಥಿಗಳು ಪ್ರಯಾಣ ವೆಚ್ಚ ಭರಿಸಲು ಅಸಾಧ್ಯವಾಗುತ್ತದೆ. ಕೂಲಿ ಮಾಡುವವರು, ಆರ್ಥಿಕ ಸಂಕಷ್ಟದಲ್ಲಿರುವವರು ದೊಡ್ಡಮಟ್ಟದ ಸಮಸ್ಯೆಗೆ ಗುರಿಯಾಗಬೇಕಾಗುತ್ತದೆ. ಹಳ್ಳಿಗಳು ಮತ್ತಷ್ಟು ಹಿಂದುಳಿಯಲು ಕಾರಣವಾಗುತ್ತದೆ. ರೈತರ ಮೂಗಿಗೆ ತುಪ್ಪ ಸವರಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

https://bayalubirugali.com/2021/02/03/haryana-left-leader-of-jjp-in-support-of-peasant-struggle/

About vijay_shankar

Check Also

ಶೂಲೇಭಾವಿ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ಮಹಾತ್ಮಗಾಂಧಿಜಿ ಅವರ ಪುತ್ಥಳಿಯನ್ನು ಡಿ ಆರ್ ಪಾಟೀಲ ಅವರಿಂದ ಅನಾವರಣ

ಅಮೀನಗಡ :ಇಂದು ಗಣರಾಜ್ಯೋತ್ಸವ ನಿಮಿತ್ತವಾಗಿ ಸುಳೇಭಾವಿ ಗ್ರಾಮದ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಕಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣವನ್ನು ಮಾಜಿ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.