Breaking News

ಉಜಿರೆಯಲ್ಲಿ ಪಾಕ್ ಪರ ಘೋಷಣೆ: ನೈಜ ಆರೋಪಿ ಬಂಧನಕ್ಕೆ ಒತ್ತಾಯಿಸಿ ಎಸ್‌ಡಿಪಿಐನಿಂದ ನಾಳೆ ಎಸ್.ಪಿ ಕಛೇರಿ ಚಲೋ

2020ರ ಡಿಸಂಬರ್ 30 ರಂದು ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯ ವೇಳೆ ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗೆ ಎಸ್‌ಡಿಪಿಐ ಕಾರ್ಯಕರ್ತರು ಜಯಶಾಲಿಯಾದ ತಮ್ಮ ಅಭ್ಯರ್ಥಿಗಳ ಪರ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ ಸಂಘಪರಿವಾರದ ಬೆಂಬಲಿಗನೊಬ್ಬ ಪಾಕ್ ಪರ ಘೋಷಣೆ ಕೂಗಿದ್ದು ವರದಿಯಾಗಿತ್ತು. ಆತನ ಬಂಧನಕ್ಕೆ ಒತ್ತಾಯಿಸಿ ಮಂಗಳೂರಿನಲ್ಲಿ ನಾಳೆ ಶುಕ್ರವಾರ ಎಸ್‌ಡಿಪಿಐ ವತಿಯಿಂದ ಎಸ್.ಪಿ ಕಛೇರಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಆದರೆ ಆ ಸಂದರ್ಭದಲ್ಲಿ ನಮ್ಮ ಕಾಯಕರ್ತರು ಪಾಕ್ ಪರ ಘೋಷಣ್ ಕೂಗಿದ್ದಾರೆ ಎಂಬ ಸುಳ್ಳು ವರದಿಯೊಂದನ್ನು ದಿಗ್ವಿಜಯ ನ್ಯೂಸ್ ಎಂಬ ಕನ್ನಡ ಟಿವಿ ಚಾನೆಲೊಂದು ಪ್ರಸಾರ ಮಾಡಿತ್ತು. ಆ ಕೂಡಲೇ ನಮ್ಮ ಪಕ್ಷದ ಸ್ಥಳೀಯ ನಾಯಕರು ಈ ಬಗ್ಗೆ ದಿಗ್ವಿಜಯ ನ್ಯೂಸ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರನ್ನು ನೀಡಿದರೂ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಆ ನಂತರ ಪೊಲೀಸರು ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಅಂದು ರಾತ್ರಿ 12 ಮಂದಿ ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿ ಅವರಲ್ಲಿ 3 ಮಂದಿಯ ವಿರುದ್ದ ದೇಶದ್ರೋಹದ ಕೇಸು ದಾಖಲಿಸಿದ್ದಾರೆ ಎಂದು SDPI ದ.ಕ ಜಿಲ್ಲಾ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಪ್ರಕಟಣೆಯಲ್ಲಿ ದೂರಿದ್ದಾರೆ.

ಈ ಘಟನೆಯ ಹಿಂದೆ ಸಂಘಪರಿವಾರ ಹಾಗೂ ದಿಗ್ವಿಜಯ ಚಾನೆಲ್‌ನ ವ್ಯವಸ್ಥಿತ ಷಡ್ಯಂತ್ರ ಅಡಗಿದೆ ಎಂಬ ಸಂಶಯಗಳು ಗಾಢವಾಗಿ ಕಾಡತೊಡಗಿದವು. ಇದೇ ಸಂದರ್ಭದಲ್ಲಿ ಉಜಿರೆಯ ಮತ ಎಣಿಕಾ ಕೇಂದ್ರದ ಹೊರಗಡೆ ಕೇಸರಿ ಧ್ವಜವನ್ನು ಹಿಡಿದಿದ್ದ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರು ಪಾಕ್ ಪರವಾಗಿ ಘೋಷಣೆ ಕೂಗುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ ಎಂದು ಅವರು ತಿಳಿಸಿದ್ದಾರೆ.

ಇದರ ವಿರುದ್ಧ ನಾವು ಜನವರಿ 7 ರಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಮುಂದೆ ಮುಷ್ಕರವನ್ನು ಹಮ್ಮಿಕೊಂಡಿದ್ದ ಸಂಧರ್ಭದಲ್ಲಿ ಅಲ್ಲಿಗೆ ಬಂದ ಉನ್ನತ ಪೊಲೀಸ್ ಅಧಿಕಾರಿಗಳು ನಮ್ಮ ನಾಯಕರೊಂದಿಗೆ ಮಾತುಕತೆ ನಡೆಸಿ ನಮ್ಮಿಂದ ತಪ್ಪಾಗಿದೆ, ನಮಗೆ ನಾಲ್ಕು ದಿನ ಕಾಲಾವಕಾಶ ಕೊಡಿ, ಖಂಡಿತ ನಾವು ನೈಜ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಮನವಿ ಮಾಡಿದ್ದರು. ಆದರೆ ಯಾವುದೇ ಬಂಧನವಾಗಿಲ್ಲ ಎಂದು ಅನ್ವರ್ ಸಾದತ್ ಬಜತ್ತೂರು ದೂರಿದ್ದಾರೆ.

ಬಂಧಿಸಿರುವ ಅಮಾಯಕರಾದ ಮೂರು ಮಂದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು, ನೈಜ ಆರೋಪಿಗಳಾದ ಬಿಜೆಪಿ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಬೇಕು ಹಾಗೂ ಸುಳ್ಳು ಮೊಕದ್ದಮೆ ದಾಖಲಿಸಿ ಅಮಾಯಕ ಯುವಕರನ್ನು ಜೈಲಿಗಟ್ಟಿದ ಬೆಳ್ತಂಗಡಿ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ್ ರವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ನಾಳೆ ಹೋರಾಟ ನಡೆಯಲಿದೆ.

ನಾಳೆ ಮಧ್ಯಾಹ್ನ 2.30ಕ್ಕೆ ಕ್ಲಾಕ್‌ ಟವರ್ ಬಳಿಯಿಂದ ಮೆರವಣಿಗೆ ಆರಂಭಗೊಳ್ಳಲಿದ್ದು, ಎಸ್‌ಪಿ ಕಚೇರಿವರೆಗೂ ನಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

About vijay_shankar

Check Also

ವಡಗೇರಿ ಗ್ರಾಮದ ನಂದೀಶ ಹನಮಂತಪ್ಪ ನೆರೆಣ್ಣವರ ರಾಜ್ಯಕ್ಕೆ ೮ನೇ ರ‍್ಯಾಂಕ್

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.