
ನವದೆಹಲಿ: ಹೈಕಮಾಂಡ್ ಬುಲಾವ್ ಮೇರೆಗೆ ಮೊನ್ನೆ ದೆಹಲಿಗೆ ಬಂದಿರುವ ರಮೇಶ್ ಜರಕಿಹೊಳಿ ನಿನ್ನೇಯೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದರು. ಅಲ್ಲದೆ, ದೇವೇಂದ್ರ ಫಡ್ನವಿಸ್ ಮೂಲಕವೇ ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸಿದ್ದರು. ಫಡ್ನವೀಸ್ ಭೇಟಿ ವೇಳೆ ರಾಜ್ಯದ ಮೂವರು ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಪುತ್ರ ಬಿ.ವೈ. ವಿಜಯೇಂದ್ರ, ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡಿದ್ದು, ಡಿ.ಕೆ. ಶಿವಕುಮಾರ್ ಜತೆ ಒಂದಾಗಿ ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಈ ನಡುವೆ ರಮೇಶ್ ಜಾರಕಿಹೊಳಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದ್ದು, ನಾಯಕರ ಭೇಟಿ ವೇಳೆಯೂ ಇದೇ ದೂರನ್ನು ಮುಂದಿಡಲಿದ್ದಾರೆ. ಅಲ್ಲದೆ, ಸಿಡಿ ಪ್ರಕರಣವನ್ನು ರ್ಶೀಘ್ರದಲ್ಲೇ ಮುಗಿಸಿ ತನಗೆ ಸಚಿವ ಸ್ಥಾನವನ್ನು ಮತ್ತೆ ನೀಡುವಂತೆ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ.