ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರದಲ್ಲಿ ಬುಧವಾರ ಭಾರೀ ಕಡಿತವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಆ ಆದೇಶವನ್ನು ಇಂದು ಬೆಳಿಗ್ಗೆಯೇ ಹಿಂಪಡೆದುಕೊಂಡಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಅಥವಾ ಎನ್‌ಎಸ್‌ಸಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳ ಕಡಿತವನ್ನು ಸರ್ಕಾರ ನಿನ್ನೆ ಘೋಷಿಸಿತ್ತು.
ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, “ಭಾರತ ಸರ್ಕಾರದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ದರಗಳಲ್ಲಿಯೇ ಮುಂದುವರಿಯುತ್ತವೆ (ಅಂದರೆ ಮಾರ್ಚ್ 2021 ರ ಹೊತ್ತಿಗೆ ಇದ್ದ ದರಗಳು). ಈ ಸಂಬಂಧಿ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ” ಎಂದು ಹೇಳಿದ್ದಾರೆ.
Interest rates of small savings schemes of GoI shall continue to be at the rates which existed in the last quarter of 2020-2021, ie, rates that prevailed as of March 2021.
— Nirmala Sitharaman (@nsitharaman) April 1, 2021
Orders issued by oversight shall be withdrawn. @FinMinIndia @PIB_India
ನಿನ್ನೆ ಸಂಜೆ, ಆರ್ಥಿಕ ವರ್ಷದ ಕೊನೆಯ ದಿನದಂದು, ಮಧ್ಯಮ ವರ್ಗದ ಠೇವಣಿದಾರರಿಗೆ ಭಾರಿ ಹೊಡೆತ ಬೀಳುವಂತೆ ಸರ್ಕಾರವು 2021-22ರ ಮೊದಲ ತ್ರೈಮಾಸಿಕದಲ್ಲಿ ಶೇ 1.1 ರಷ್ಟು ಬಡ್ಡಿದರಗಳಲ್ಲಿ ಭಾರಿ ಕಡಿತವನ್ನು ಘೋಷಿಸಿತ್ತು. ಆದರೆ ಎರಡನೇ ಸುತ್ತಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಉಳಿತಾಯ ಖಾತೆಯ ಮೇಲಿನ ವಾರ್ಷಿಕ ಬಡ್ಡಿದರವನ್ನು ಶೇ.4ರಿಂದ ಶೇ.3.5ಕ್ಕೆ ಇಳಿಸಲಾಗಿತ್ತು. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಬಡ್ಡಿದರವನ್ನು ಶೇ.7.1ರಿಂದ ಶೇ.6.4ಕ್ಕೆ ಇಳಿಸಲಾಗಿತ್ತು. ಎಪ್ರಿಲ್ 1ರಿಂದ ಪರಿಷ್ಕೃತ ಬಡ್ಡಿದರಗಳು ಜಾರಿಗೆ ಬರಲಿವೆ ಎಂದು ಸರ್ಕಾರ ಹೇಳಿತ್ತು.

ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ (ಎನ್‌ಎಸ್‌ಸಿ)ನ ಬಡ್ಡಿದರ ಶೇ.5.9 ಹಾಗೂ ಶೇ.7.6ರಷ್ಟಿದ್ದ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಶೇ.6.9ಕ್ಕೆ ನಿಗದಿಪಡಿಸಲಾಗಿತ್ತು.
ಐದು ವರ್ಷಗಳ ಅವಧಿಯ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವನ್ನು ಶೇ.7.4ರಿಂದ ಶೇ.6.5ಕ್ಕೆ ಇಳಿಸಲಾಗಿತ್ತು. ಕಿಸಾನ್ ವಿಕಾಸ್ ಪತ್ರದ (ಕೆವಿಪಿ) ಬಡ್ಡಿದರವನ್ನು ಶೇ.6.2ಕ್ಕೆ ಕಡಿತಗೊಳಿಸಲಾಗಿದೆ. 2020-21ರ ಸಾಲಿನಲ್ಲಿ ಕೆವಿಪಿ ಬಡ್ಡಿದರ ಶೇ.6.9ರಷ್ಟಿತ್ತು.
ಅಂಚೆ ಕಚೇರಿ ಉಳಿತಾಯ ಠೇವಣಿ ಮೇಲಿನ ಬಡ್ಡಿದರವನ್ನು ಶೇ.3.5 ಶೇಕಡಕ್ಕೆ ಇಳಿಸಲಾಗಿದ್ದರೆ, ಒಂದರಿಂದ ಐದು ವರ್ಷಗಳ ಅವಧಿಯ ಠೇವಣಿಗೆ (ಟರ್ಮ್ ಡೆಪಾಸಿಟ್) ಶೇ.4.4ರಿಂದ 4.1ರರೆಗೆ ಬಡ್ಡಿದರ ದೊರೆಯಲಿದೆ. ಐದು ವರ್ಷಗಳ ಅವಧಿಯ ರಿಕರಿಂಗ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಶೇ.5.8ಕ್ಕೆ ಇಳಿಸಲಾಗಿತ್ತು.
ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿರುವುದು ಇದು ಎರಡನೇ ಬಾರಿಯಾಗಿತ್ತು. 2020-21ರ ಸಾಲಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರಕಾವು ಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಶೇ.1ರಷ್ಟು ಕಡಿತಗೊಳಿಸಿತ್ತು.
ಆದರೆ ಈಗ ಈ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ.