ಲಾಕ್‍ಡೌನ್ ಜಾರಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ರಾಜ್ಯ ಸರ್ಕಾರ ಪರಿಹಾರದ ಮೊತ್ತವಾಗಿ ಮೊದಲ ಕಂತಿನ 666 ಕೋಟಿ ಹಣವನ್ನು ಇಂದು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೆಕ್ಕೆಜೋಳ ಬೆಳೆದ ಪ್ರತಿಯೊಬ್ಬ ರೈತರ ಪ್ರತಿ ಹೆಕ್ಟೇರ್‍ಗೆ 5 ಸಾವಿರ ನೀಡುವುದಾಗಿ ಘೋಷಣೆ ಮಾಡಿದ್ದರು.

ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರು ಮೊದಲ ಕಂತಿನಲ್ಲೇ 666 ಕೋಟಿ ರೂ. ಬಿಡುಗಡೆ ಮಾಡಿ ಸಂಕಷ್ಟದಲ್ಲಿದ್ದ ಅನ್ನದಾತರ ರಕ್ಷಣೆಗೆ ಧಾವಿಸಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಇಲಾಖೆಯಲ್ಲಿ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ 100 ದಿನ ಸಾಧನೆ ಕುರಿತು ಕಿರುಹೊತ್ತಿಗೆ ಬಿಡುಗಡೆ ಮಾಡುವುದರ ಜೊತೆಗೆ ಆನ್‍ಲೈನ್ ಮೂಲಕವೇ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿದರು.
ಮುಂದಿನ ದಿನಗಳಲ್ಲಿ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು, ಮಡಿವಾಳರು, ಕ್ಷೌರಿಕರು, ಚಮ್ಮಾರರು, ಬಡಗಿ ಸೇರಿದಂತೆ ಶ್ರಮಿಕ ವರ್ಗಕ್ಕೂ ಪರಿಹಾರದ ಮೊತ್ತ ಬಿಡುಗಡೆಯಾಗುವ ಸಂಭವವಿದೆ.

ಮೆಕ್ಕೆಜೋಳ ಬೆಳೆದು ಸಂಕಷ್ಟದಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ 1800 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಸುಮಾರು 10 ಲಕ್ಷ ರೈತರು 10 ಸಾವಿರ ಹೆಕ್ಟೇರ್‍ನಲ್ಲಿ ಮೆಕ್ಕೆ ಜೋಳ ಬೆಳೆದವರಿಗೆ ಪ್ಯಾಕೇಜ್ ಘೋಷಿಸಲಾಗಿತ್ತು. ಇದೇ ರೀತಿ ಹೂ ಬೆಳೆಗಾರರು ಸಹ ಲಾಕ್‍ಡೌನ್ ಜಾರಿಯಿಂದಾಗಿ ಸಂಕಷ್ಟದಲ್ಲಿದ್ದ ಸ್ಥಿತಿಯನ್ನು ಅರಿತು ಬಿಎಸ್‍ವೈ 25 ಸಾವಿರ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದರು. ಇದೀಗ ಅದರ ಮೊದಲ ಭಾಗವಾಗಿ 666 ಕೋಟಿ ರೂ. ಮೊತ್ತವನ್ನು ಮೆಕ್ಕೆಜೋಳ ಮತ್ತು ಹೂವು ಬೆಳೆಗಾರರಿಗೆ ಬಿಡುಗಡೆ ಮಾಡಲಾಗಿದೆ.