ಶ್ರೀನಗರ(ಆ.05): ಭಾರತೀಯ ಸೇನಾಪಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಜೊತೆಗಿನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಲ್ಲಿ ಭದ್ರತಾ ಕಾರ್ಯಕ್ಕೆ ಮಹಿಳಾ ಯೋಧರನ್ನು ನಿಯೋಜಿಸಲಾಗಿದೆ. ಎಲ್‌ಒಸಿಗೆ ಸಾಗುವ ರಸ್ತೆಯನ್ನು ಕಾಯಲು ಪುರುಷ ಯೋಧರ ಜೊತೆಗೆ ಅರ್ಧ ಡಜನ್‌ಗೂ ಹೆಚ್ಚು ಅಸ್ಸಾಂ ರೈಫಲ್ಸ್ ಪಡೆಯ ಮಹಿಳಾ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
10 ಸಾವಿರ ಅಡಿಗೂ ಎತ್ತರದ ಪ್ರದೇಶದಲ್ಲಿ ಸಾಧನಾ ಟಾಪ್ ಎಂಬಲ್ಲಿ ‘ರೈಫಲ್ ವಿಮೆನ್’ ಎಂದು ಕರೆಸಿಕೊಳ್ಳುವ ಈ ಪಡೆ ಕರ್ತವ್ಯ ನಿರ್ವಹಿಸುತ್ತಿದ್ದು, ಭಾರತೀಯ ಸೇನೆಯ ಮಹಿಳಾ ಅಧಿಕಾರಿಯೊಬ್ಬರು ನೇತೃತ್ವ ವಹಿಸಿದ್ದಾರೆ. ವಾಸ್ತವವಾಗಿ ಈ ಯೋಧರು ದೇಶದ ಅತ್ಯಂತ ಹಳೆಯ ಅರೆಸೇನಾಪಡೆಯಾದ ಅಸ್ಸಾಂ ರೈಫಲ್ಸ್‌ನಿಂದ ಭಾರತೀಯ ಸೇನೆಗೆ ಎರವಲು ಸೇವೆಯ ಆಧಾರದಲ್ಲಿ ನೇಮಕಗೊಂಡಿದ್ದಾರೆ.
ಸಾಧನಾ ಪಾಸ್ ಮೂಲಕ ಪಾಕಿಸ್ತಾನದಿಂದ ನಡೆಯುವ ಮಾದಕ ದ್ರವ್ಯ ಕಳ್ಳಸಾಗಣೆ, ನಕಲಿ ನೋಟು ಕಳ್ಳಸಾಗಣೆ ಹಾಗೂ ಶಸ್ತ್ರಾಸ್ತ್ರಗಳ ಸಾಗಣೆಯನ್ನು ಈ ಪಡೆ ತಡೆಯಲಿದೆ. ಸಾಧನಾ ಪಾಸ್ ಮೂಲಕ ಪ್ರವೇಶಿಸುವ ವಾಹನಗಳನ್ನು ಭಾರತೀಯ ಸೇನೆಯ ಯೋಧರು ತಪಾಸಣೆ ಮಾಡಿ ಒಳಗೆ ಬಿಡುತ್ತಾರೆ. ಆದರೆ, ವಾಹನಗಳಲ್ಲಿ ಮಹಿಳೆಯರೂ ಇರುವುದರಿಂದ ವಿಸ್ತೃತ ತಪಾಸಣೆ ನಡೆಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ಮಹಿಳಾ ಯೋಧರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್ ನೀಡಿದ್ದರೂ ಸಶಸ್ತ್ರ ಕರ್ತವ್ಯಗಳಿಗೆ ಮಹಿಳೆಯರನ್ನು ನೇಮಿಸಲು ಅನುಮತಿ ದೊರಕಿಲ್ಲ.
