’ವಾರಕ್ಕೆ 3 ರಿಂದ 4 ದಿನ ಕೆಲಸ ಮಾಡುತ್ತಿದ್ದ ನಾವು, ಕೊರೊನಾ ಸಂಕಷ್ಟದಲ್ಲಿ ದಿನದ 24 ಗಂಟೆಗಳು ಕಾರ್ಯನಿರ್ವಹಿಸುತ್ತಿದ್ದೇವೆ. ಕೆಲಸ ಮುಗಿಸಿ ನಮಗೆಲ್ಲಿ ಸೋಂಕು ಹರಡಿದೆಯೋ, ಮನೆಯಲ್ಲಿ ಯಾರಿಗಾದರೂ ಹಬ್ಬುತ್ತದೆಯೋ ಎಂಬ ಭಯದಲ್ಲೇ ಮನೆಗೆ ಕಾಲಿಡುತ್ತೇವೆ. ಇದು ನಮ್ಮ ಕರ್ತವ್ಯ ಎಂದು ನಮ್ಮ ಪ್ರಾಣವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದೇವೆ ಆದರೆ, ನಾವಿರುವ ಹಳ್ಳಿಗಳಲ್ಲೇ ನಮಗೆ ಗೌರವ ದೊರೆಯುವುದಿಲ್ಲ. ಈ ಸಮಯದಲ್ಲಿ ಜಾಗೃತಿ ಮೂಡಿಸಲು ಸಹಾಯ ಮಾಡಬೇಕಾದ ಯುವ ಜನತೆಯೇ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ” ಎಂದು ನೋವು ತೋಡಿಕೊಳ್ಳುತ್ತಾರೆ ಆಶಾ ಕಾರ್ಯಕರ್ತೆ ಪ್ರಿಯಾಂಕಾ.
ಹೌದು, ಕೊರೊನಾ ಸಾಂಕ್ರಾಮಿಕ ರೋಗ ಹಳ್ಳಿಗಳಿಗೆ ಲಗ್ಗೆಯಿಟ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ವಹಿಸಬೇಕಿರುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಎರಡು ಬಾರಿ ಲಾಕ್‌ಡೌನ್ ಮುಂದುವರೆಸಲಾಗಿದೆ. ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಣಕ್ಕೆ, ಕೊರೊನಾ ಜಾಗೃತಿಗೆ ಮೂಡಿಸುವಲ್ಲಿ ಮುಂಚೂಣಿಯಲ್ಲಿ ಇರುವವರು ಈ ಆಶಾ ಕಾರ್ಯಕರ್ತೆಯರು. ಇವರ ಸೇವೆ ನಿಜಕ್ಕೂ ಶ್ಲಾಘನಿಯವಾದದ್ದು. ಆದರೆ ಅವರಿಗೆ ಅಗೌರವ ಸೂಚಿಸುವ ಘಟನೆಗಳು ವರದಿಯಾಗುತ್ತಿರುವುದು ದುರಂತ.
ಸರ್ಕಾರ ನೀಡುವ ಅಲ್ಪ ಗೌರವಧನದಲ್ಲಿ ಜೀವನ ನಡೆಸುವ ಇವರು ಪ್ರತಿ ಬಾರಿಯು ತಮ್ಮ ಬೇಡಿಕೆ ಈಡೇರಿಕೆಗಾಗಿ ರಾಜಧಾನಿ ಬೆಂಗಳೂರಿನ ಕದ ತಟ್ಟಿದ್ದಾರೆ. ಅಲ್ಪ ಸ್ವಲ್ಪ ಪರಿಹಾರ ಪಡೆದಿದ್ದಾರೆ. ಆದರೆ, ಕೊರೊನಾದಂತಹ ಕಾಲದಲ್ಲಿ ಇವರ ಸೇವೆ ಅಮೂಲ್ಯವಾಗಿದೆ. ಪ್ರಾಣವನ್ನು ಲೆಕ್ಕಿಸದೇ ಕೊರೊನಾ ಸೋಂಕಿತರ ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಆದರೆ, ಸಮಾಜ ಇವರನ್ನು ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಅಸಹನೀಯವಾಗಿದೆ. ಹಳ್ಳಿಗಳಲ್ಲಿ ತಮ್ಮನ್ನು ನಡೆಸಿಕೊಳ್ಳುವ ರೀತಿಗೆ ಆಶಾ ಕಾರ್ಯಕರ್ತರು ತೀವ್ರ ಬೇಸರ ವ್ಯಕ್ತಪಡಿಸುತ್ತಾರೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಲಕಟ್ಟೆ ತಾಂಡ್ಯ ಉಪ ವಿಭಾಗದಲ್ಲಿ ಆಶಾ ಕಾರ್ಯಕರ್ತೆಯಾಗಿ ಸುಮಾರು ನಾಲ್ಕು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಿಯಾಂಕಾ ತಮ್ಮ ಕೆಲಸದ ಅನುಭವ, ಕೆಲಸದ ಸಮಯದಲ್ಲಿ ತಾವು ಅನುಭವಿಸುವ ಸವಾಲುಗಳನ್ನು ಹಂಚಿಕೊಂಡಿದ್ದು ಹೀಗೆ.