ಬೆಂಗಳೂರು, ಆಗಸ್ಟ್ 26: ಪ್ರತಿಪಕ್ಷ ನಾಯಕರು ಕೇಳಿರುವ ಯಾವುದೇ ಮಾಹಿತಿಯನ್ನು ಸರ್ಕಾರದ ಇಲಾಖೆಗಳು ನೀಡುತ್ತಿಲ್ಲ. ಆದ್ದರಿಂದ, ಮುಂಬರುವ ಅಧಿವೇಶನದಲ್ಲಿ ಐಎಎಸ್ ಅಧಿಕಾರಿಗಳ ವಿರುದ್ಧ ಸಿದ್ದರಾಮಯ್ಯ ಹಕ್ಕುಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ.
ಜಿಎಸ್‌ಟಿ, ಪ್ರವಾಹದ ಸಂದರ್ಭದಲ್ಲಿ ಬಿಡುಗಡೆಯಾದ ಹಣಕಾಸಿನ ವಿವರ. ಕೋವಿಡ್ 19 ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳಿಗೆ ಮಾಡಿರುವ ಖರ್ಚು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ.
ಜೂನ್‌ನಿಂದ ಆಗಸ್ಟ್ ತನಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿವಿಧ ಮಾಹಿತಿ ಕೇಳಿ 40 ಪತ್ರಗಳನ್ನು ಬರೆದಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಇದರಿಂದಾಗಿ ಹಕ್ಕು ಚ್ಯುತಿ ಮಂಡನೆ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ.

ಒಂದು ವೇಳೆ ಸದನದಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡಿದರೆ ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಹಕ್ಕು ಚ್ಯುತಿಗೆ ಒಳಗಾಗಲಿದ್ದಾರೆ.
ಹಕ್ಕು ಚ್ಯುತಿ ಮಂಡಿಸಲು ಚರ್ಚೆ
ಕೇಳಿದ ಮಾಹಿತಿಯನ್ನು ನೀಡದ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುವ ಕುರಿತು ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮಳೆಗಾಲದ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಹಕ್ಕು ಚ್ಯುತಿ ಮಂಡನೆ ಮಾಡುವ ಸಾಧ್ಯತೆ ಇದೆ.

ಕಂದಾಯ ಇಲಾಖೆಯ ಮಾಹಿತಿ
ಸಿದ್ದರಾಮಯ್ಯ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 8 ಮಾಹಿತಿಗಳನ್ನು ಕೇಳಿದ್ದಾರೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ ಅಡಿ ಕೇಳಿದ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ. ಉತ್ತರ ನೀಡದ ಕಾರಣ ಸಿದ್ದರಾಮಯ್ಯ ಹಕ್ಕುಚ್ಯುತಿ ಮಂಡಿಸಲು ಮುಂದಾಗಿದ್ದಾರೆ.

ಪ್ರವಾಹದ ಮಾಹಿತಿ ನೀಡಿಲ್ಲ
2020ರ ಆಗಸ್ಟ್ ತಿಂಗಳಿನಲ್ಲಿ ಪ್ರವಾಹ ಪೀಡಿತ ತಾಲೂಕುಗಳು, ಹಾನಿಯಾದ ಮನೆಗಳು, ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ಆದ ಹಾನಿಯ ವಿವರಗಳನ್ನು ನೀಡುವಂತೆ ಸಿದ್ದರಾಮಯ್ಯ ಮಾಹಿತಿ ಕೇಳಿದ್ದರು. ಆದರೆ, ಯಾವುದೇ ಮಾಹಿತಿಯನ್ನೂ ನೀಡಿಲ್ಲ.

ಜಿಎಸ್‌ಟಿ ಮಾಹಿತಿ ನೀಡಿಲ್ಲ
ಆರ್ಥಿಕ ಇಲಾಖೆಗೆ ಪತ್ರ ಬರೆದಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಿಡುಗಡೆ ಮಾಡಬೇಕಾದ ಜಿಎಸ್‌ಟಿ ಪಾಲು, ಬಿಡುಗಡೆ ಮಾಡಲು ಬಾಕಿ ಇರುವ ಜಿಎಸ್‌ಟಿ ಪಾಲು ಸೇರಿದಂತೆ ವಿವಿಧ ಮಾಹಿತಿ ಹೇಳಿದ್ದರು.