
ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ.
‘ನನಗೆ ಶೀತ ಮತ್ತು ಜ್ವರ ಕಾಣಿಸಿಕೊಂಡಿತ್ತು. ಉಸಿರಾಟಕ್ಕೆ ಕಷ್ಟವಾಗುತ್ತಿತ್ತು. ಹಾಗಾಗಿ, ಕೋವಿಡ್-19 ಪರೀಕ್ಷೆಗೆ ಒಳಗಾದೆ. ವೈದ್ಯಕೀಯ ಪರೀಕ್ಷೆಯ ವರದಿ ಬಂದಿದ್ದು, ಕೋವಿಡ್ ಇರುವುದು ದೃಢಪಟ್ಟಿದೆ’ ಎಂದು ತಿಳಿಸಿದ್ದಾರೆ. ಪ್ರಸ್ತುತ ಅವರಿಗೆ ಜ್ವರ ಕಡಿಮೆಯಾಗಿದೆ. ಶೀತ ಮಾತ್ರ ಇದೆಯಂತೆ. ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಎಸ್‌ಪಿಬಿ ವಿಡಿಯೊದಲ್ಲಿ ನೀಡಿರುವ ಸಾರಾಂಶ ಇಲ್ಲಿದೆ;
‘ಕಳೆದ ಎರಡು- ಮೂರು ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.ಶೀತ ಮತ್ತು ಜ್ವರ ಕೂಡ ಕಾಣಿಸಿಕೊಂಡಿತು. ಇದರ ಬಗ್ಗೆ ನಾನು ನಿರ್ಲಕ್ಷ್ಯವಹಿಸದೆ ವೈದ್ಯರ ಬಳಿಗೆ ಚಿಕಿತ್ಸೆ ಪಡೆಯಲು ಮುಂದಾದೆ. ಪರೀಕ್ಷೆಯ ಬಳಿಕ ಕೊರೊನಾ ಸೋಂಕು ಸಣ್ಣ ಪ್ರಮಾಣದಲ್ಲಿದೆ. ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದರು. ಇದಕ್ಕೆ ನನ್ನ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಹಾಗಾಗಿ, ಆಸ್ಪತ್ರೆಗೆ ದಾಖಲಾದೆ. ನನ್ನ ಆರೋಗ್ಯದ ಬಗ್ಗೆ ಯಾರೊಬ್ಬರು ಚಿಂತಿಸಬೇಕಿಲ್ಲ. ನನ್ನ ಆರೋಗ್ಯ ವಿಚಾರಿಸಲು ಮೊಬೈಲ್ ಕರೆ ಮಾಡಬೇಡಿ. ಕರೆ ಸ್ವೀಕರಿಸುವ ಸ್ಥಿತಿಯಲ್ಲಿ ನಾನಿಲ್ಲ. ಶೀತದ ಹೊರತಾಗಿ ನಾನೀಗ ಚೆನ್ನಾಗಿದ್ದೇನೆ. ಜ್ವರವೂ ಕಡಿಮೆಯಾಗಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣ ಗುಣಮುಖನಾಗುತ್ತೇನೆ’.