ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ, ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇಂದು ಸಹ ಪ್ರಯಾಣಿಕರ ಪರದಾಟ ಮುಂದುವರಿದಿದೆ. ಹಲವು ಕಡೆಗಳಲ್ಲಿ ಓಡಾಟಕ್ಕೆ ಖಾಸಗಿ ಬಸ್ಸುಗಳು ಸಿಗುತ್ತಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಬೆಂಗಳೂರಿನಲ್ಲಿ ಯಾವಾಗಲೂ ಗಿಜಿಗಿಡುತ್ತಿದ್ದ ಕೆ ಆರ್ ಮಾರುಕಟ್ಟೆ, ಮೆಜೆಸ್ಟಿಕ್ ನಲ್ಲಿ ಇಂದು ಖಾಲಿ ಖಾಲಿಯ ವಾತಾವರಣ.
ಹಲವು ಕಡೆಗಳಲ್ಲಿ ಅಧಿಕಾರಿಗಳ ವರ್ಗಾವಣೆ: ಸಾರಿಗೆ ಇಲಾಖೆ ನೌಕರರ ಮುಷ್ಕರದ ಮಧ್ಯೆಯೇ ಮಂಗಳೂರು, ದಾವಣಗೆರೆ, ಮಂಡ್ಯ, ಮೈಸೂರು ಘಟಕಗಳಿಂದ ನೌಕರರು ಕರ್ತವ್ಯಲೋಪ ಎಸಗಿದ್ದಾರೆ ಎಂದು ಆರೋಪಿಸಿ ವರ್ಗಾವಣೆ ಮಾಡಲಾಗಿದೆ.
ಚಿತ್ರದುರ್ಗದಲ್ಲಿ ಅಧಿಕಾರಿಗಳು ಸಾರಿಗೆ ಸಿಬ್ಬಂದಿಯ ಮನವೊಲಿಸಿ ಎರಡು ಕೆಎಸ್ ಆರ್ ಟಿಸಿ ಬಸ್ಸುಗಳನ್ನು ರಸ್ತೆಗಿಳಿಸಿವೆ ಎಂದು ತಿಳಿದುಬಂದಿದೆ. ಸಾರಿಗೆ ನೌಕರರ ಮುಷ್ಕರ, ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನನುಕೂಲವಾಗುವುದು ಬೇಡವೆಂದು ನೈರುತ್ಯ ರೈಲ್ವೆ ರೈಲುಗಳ ಸಂಚಾರ ವಿಸ್ತರಿಸಿದೆ.
ಇನ್ನೊಂದೆಡೆ ಕೊರೋನಾ ಎರಡನೇ ಅಲೆ ತೀವ್ರವಾಗಿರುವುದರಿಂದ ಬೆಂಗಳೂರು ಸೇರಿದಂತೆ ರಾಜ್ಯದ 10 ನಗರಗಳಲ್ಲಿ ಇಂದು ರಾತ್ರಿಯಿಂದ 10 ದಿನಗಳ ಕಾಲ ನೈಟ್ ಕರ್ಪ್ಯೂವನ್ನು ರಾಜ್ಯ ಸರ್ಕಾರ ವಿಧಿಸಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೌಕರರು ಎಲ್ಲಿಗೂ ಹೋಗುವಂತಿಲ್ಲ.