
ಬೆಳಗಾವಿ : ಕುರುಬ ಸಮುದಾಯಕ್ಕೆ ಎಸ್‍ಟಿ ಸೌಲಭ್ಯಕ್ಕಾಗಿ ಆಗ್ರಹಿಸಿ ಒಗ್ಗಟ್ಟಾಗಿರುವ ಸಮಾಜದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ಮುಖಂಡರು. ಇಲ್ಲಿ ಸೇರಿರುವ ಎಲ್ಲರ ಕೂಗು ಒಂದೇ ಅದು ತಮ್ಮ ಸಮಾಜವನ್ನು ಎಸ್‍ಟಿಗೆ ಸೇರಿಸಿ ಎಂಬುದು. ಅನೇಕ ದಿನಗಳಿಂದ ಹೋರಾಟ ಕೈಗೊಂಡಿರುವ ಕುರುಬ ಸಮಾಜ ತಮ್ಮ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದೆ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಬೇಕು. ಇಲ್ಲದೇ ಹೋದ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಪರೋಕ್ಷವಾಗಿ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ರವಾನಿಸಿದರು. ಶನಿವಾರ ಬೆಳಗಾವಿಯಲ್ಲಿ ಹಾಲುಮತ ಸಮಾಜದ ಮೂಲ ಗುರುಮಠಗಳ, ಗುರು ಪೀಠಗಳಲ್ಲಿರುವ ಒಡೆಯರ್‍ಗಳ, ಗುರುವಿನವರ, ತಾತಗಳ ಮಹತ್ವದ ಸಭೆಯನ್ನು ಕರೆದಿದ್ದರು. ಈ ವೇಳೆ ಈ ಸಭೆಗೆ ಡೊಳ್ಳು ಭಾರಿಸುವ ಮೂಲಕ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ಕಾಗಿನೆಲೆಯ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ ಈಗಾಗಲೇ ಸಮಾಜದ ಮುಖಂಡರ ನೇತೃತ್ವದಲ್ಲಿ ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದ್ರೆ ಹೋರಾಟವನ್ನು ಮತ್ತಷ್ಟು ತೀವ್ರತರಗೊಳಿಸುವ ನಿಟ್ಟಿನಲ್ಹಂತ ಹಂತವಾಗಿ ಹೋರಾಟ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಇನ್ನು ಜನವರಿ 15ರಂದು ಸೂರ್ಯ ತನ್ನ ದಿಕ್ಕನ್ನು ಬದಲಾಯಿಸುವ ಸಂಕ್ರಮಣ ದಿನ, ಆ ದಿನವೇ ಕುರುಬರ ದಿಕ್ಕನ್ನು ಬದಲಾಯಿಸಲಿ ಎಂಬ ಆಲೋಚನೆ ಇಟ್ಟುಕೊಂಡು ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಸುಮಾರು 340 ಕಿ.ಮಿ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಮಾತನಾಡಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಸಮಾಜದ ಸಹಸ್ರ ಸಹಸ್ರ ಜನರು ಸೇರಬೇಕು. ಕೊನೆ ದಿನ ಬೆಂಗಳೂರಿನಲ್ಲಿ 10 ಲಕ್ಷ ಜನರನ್ನು ಸೇರಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡೋಣ ಎಂದು ಈ ವೇಳೆ ಕರೆ ನೀಡಿದರು.ಸಭೆಯಲ್ಲಿ ಈಶ್ವರಾನಂದ ಸ್ವಾಮೀಜಿ, ಅವಧೂತಸಿದ್ಧ ಸ್ವಾಮೀಜಿ, ಬಸವರಾಜ್ ಬಸಲಿಗುಂಡಿ, ಮಾದಪ್ಪ ಮೆಟುರನವರ ಸೇರಿದಂತೆ ಸಮಾಜದ ವಿವಿಧ ಸ್ವಾಮೀಜಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.ಶನಿವಾರ ಕುರುಬ ಸಮುದಾಯದ ಎಸ್‍ಟಿ ಹೋರಾಟದ ಸಭೆಯಲ್ಲಿ ಭಾಗಿಯಾದ ಬಳಿಕ ಕೋರ್ಟ್ ಆವರಣದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ಪುತ್ಥಳಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮಾಲಾರ್ಪಣೆ ಮಾಡಿದರು. ಈ ವೇಳೆ ಈಶ್ವರಪ್ಪಗೆ ಶಾಸಕ ಅನಿಲ್ ಬೆನಕೆ ,ಹಲವು ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.