
BB News Kannada :
ನವದೆಹಲಿ : ಸುಮಾರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಈಗ ಆಗುವ ಸಾಧ್ಯತೆಗಳಿವೆ. ಏಕೆಂದರೆ ಸಂಪುಟ ಪುನರ್ರಚನೆ ವೇಳೆ ಕೆಲ ಸಚಿವರನ್ನು ಕೈ ಬಿಡಲು ನಿರ್ಧರಿಸ ಲಾಗಿದ್ದು, ಅಂತಹವರಿಗೆ ಧನ್ಯವಾದ ಹೇಳಲೆಂದೇ ಇಂದು ಕೇಂದ್ರ ಸರ್ಕಾರದ `ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ’ ಕರೆಯಲಾಗಿದೆ.
ಪ್ರಧಾನಿ ಮೋದಿ ಇಂದು ಸಂಜೆ ೪ ಗಂಟೆಗೆ ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ ಕರೆದಿದ್ದು ಆ ವೇಳೆ ಎಲ್ಲಾ ಸಚಿವರಿಗೂ ಧನ್ಯವಾದ ಹೇಳಲಿದ್ದಾರೆ. ಈ ಮೂಲಕ ಪುನ್ರರಚನೆ ವೇಳೆ ಕೆಲ ಸಚಿವರು ಸ್ಥಾನ ಬಿಡಬೇಕೆಂಬ ಸಂದೇಶ ರವಾನೆ ಮಾಡಲಿದ್ದಾರೆ. ಆದರೆ ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡ ಅಥವಾ ಪ್ರಹ್ಲಾದ್ ಜೋಶಿ ಇಬ್ಬರೂ ಕೇಂದ್ರ ಸಂಪುಟದಲ್ಲಿ ಮುಂದುವರೆಯಲಿ ದ್ದಾರೆ. ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ.

ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆಯ ಬಳಿಕ ರಾಷ್ಟ್ರಪತಿಗಳಿಗೆ ಹೊಸ ಸಚಿವ ಸಂಪುಟದ ಪಟ್ಟಿ ರವಾನೆ ಆಗಲಿದೆ. ನಾಳೆ ಸಂಜೆ ಅಥವಾ ನಾಳಿದ್ದು ರಾಷ್ಟ್ರಪತಿಗಳಿಗೆ ಪಟ್ಟಿ ರವಾನೆ ಆಗಲಿದ್ದು ಬಳಿಕ ಅವರು ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಿದ್ದಾರೆ. ಸದ್ಯ ಕೇಂದ್ರ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳು ೨೭. ಈ ಪೈಕಿ ೨೦ಕ್ಕೂ ಹೆಚ್ಚು ಸ್ಥಾನಗಳನ್ನು ಈಗ ತುಂಬಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷ ಚುನಾವಣೆ ನಡೆಯುವ ಉತ್ತರ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕರಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಸಣ್ಣ

ರಾಜ್ಯದಿಂದ ಇಬ್ಬರು ಸಂಸದರು ಹೊಸದಾಗಿ ಕೇಂದ್ರ ಸಂಪುಟ ಸೇರುವ ಸಾಧ್ಯತೆ ಇದೆ. ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ಗುಲ್ಬರ್ಗ ಸಂಸದ ಉಮೇಶ್ ಜಧವ್ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ. ಮೋಹನ್ ನಡುವೆ ತೀವ್ರ ಸ್ಪರ್ಧೆ ಇದೆ. ಲಿಂಗಾಯತರ ಪೈಕಿ ಬಿ.ವೈ. ರಾಘವೇಂದ್ರ ಅಥವಾ ಶಿವಕುಮಾರ್ ಉದಾಸಿ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.
ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಸಾವಿನಿಂದ ಖಾಲಿಯಾಗಿರುವ ಸ್ಥಾನಕ್ಕೆ ಲಿಂಗಾಯತ ಸಮುದಾಯದವರಿಗೇ ಅವಕಾಶ ನೀಡಲಾಗುತ್ತದೆ. ರಾಜ್ಯದಲ್ಲಿ ಈಗ ಯಡಿಯೂರಪ್ಪ ನಾಯಕತ್ವ ಬದಲಾವಣೆ ಚರ್ಚೆಯ ಹಿನ್ನಲೆಯಲ್ಲಿ ಅವರನ್ನು ಬದಲಿಸಬೇಕು ಎಂದು ಹೈಕಮಾಂಡ್ ನಿರ್ಧರಿಸಿದ್ದರೆ ಅವರ ಪುತ್ರ ರಾಘವೇಂದ್ರಗೆ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ಮುತ್ಸದಿ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದ ಕಾರಣಕ್ಕೆ ಗುಲ್ಬರ್ಗ ಸಂಸದ ಉಮೇಶ್ ಜಧವ್ ಅವರಿಗೆ ಅಥವಾ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ನಿರ್ಧರಿಸಿದರೆ ಪಿ.ಸಿ. ಮೋಹನ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಗಳಿವೆ.