ಸ್ಥಿರತೆಯತ್ತ ಘಟಪ್ರಭಾ,ಮಲಪ್ರಭೆಯರು!
ಕೊಯ್ನಾ ಡ್ಯಾಮಿನಿಂದ ಹೆಚ್ಚಿಗೆನೀರಿನ ಬಿಡುಗಡೆಯಿಲ್ಲ:
ನೀರಿನ ಮಟ್ಟ ಕಾಯ್ದುಕೊಂಡ ಆಲಮಟ್ಟಿ ತುಂಬಲು ಇನ್ನೂ 13 ಟಿ ಎಮ್ ಸಿ ಬಾಕಿ! ಮಲಪ್ರಭೆಯ ನೀರಾವೃತ್ತಗೊಂಡ ರಾಮದುರ್ಗ ಸುನ್ನಾಳ ಹಣಮಂತ! ಗ್ರಾಮಕ್ಕೆ ಗ್ರಾಮವೇ ಸ್ಥಳಾಂತರ! ಕಳೆದ ವರ್ಷದ್ದೇ ಪುನರಾವರ್ತನೆ!ಕಿಲಬನೂರು,ಗೊಣಗನೂರು ಗ್ರಾಮಸ್ಥರು ಆತಂಕದಲ್ಲಿ! ಬೆಳಗಾವಿ ವಡಗಾವಿಯ ಯಡಿಯೂರಪ್ಪ ಮಾರ್ಗದ ಬದಿಯ ಬೆಳೆಯೆಲ್ಲ ಜಲಮಯ, ಸೋಮವಾರ ಪ್ರವಾಹದ ಆತಂಕ ಕೊಂಚ ಕಮ್ಮಿಯಾಗುತ್ತಿದೆ.ನಿನ್ನೆ ರವಿವಾರ ಏರಿಕೆಯಲ್ಲಿದ್ದ ಆತಂಕ ಇಂದು ಇಳಿಮುಖವಾಗತೊಡಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಬಳಿಯ ನವಿಲುತೀರ್ಥ ಡ್ಯಾಮಿಗೆ ಹರಿದು ಬರುತ್ತಿರುವ ಮಲಪ್ರಭೆಯು ಸ್ಥಿರತೆ ಕಾಯ್ದುಕೊಂಡಿದೆ.ಖಾನಾಪುರ ಸುತ್ತ ಮುತ್ತಲೂ ವರುಣನ ಅರ್ಭಟ ಕಡಿಮೆಯಾಗಿದ್ದರಿಂದ ಒಳಹರಿವು 25 ಸಾವಿರಕ್ಕೆ ಕುಸಿದಿದೆ.ಹೊರಹರಿವು ಸಹ ನಿನ್ನೆ ರವಿವಾರ ರಾತ್ರಿ ಹತ್ತು ಗಂಟೆಯ 25 ಸಾವಿರ ಕ್ಯೂಸೆಕ್ಸ ಮುಂದುವರೆದಿದೆ.
37.7 ಟಿ ಎಮ್ ಸಿ ಸಾಮರ್ಥ್ಯದ ಡ್ಯಾಮಿನಲ್ಲಿ ಸೋಮವಾರ ಸಂಜೆ 5 ಗಂಟೆಯವರೆಗೆ 34.44 ಟಿ ಎಮ್ ಸಿ ನೀರು ಸಂಗ್ರಹವಾಗಿದೆ.2079.5 ಅಡಿಯ ಎತ್ತರದ ಪೈಕಿ ಈಗ 2077 ಅಡಿ ನೀರು ನಿಂತಿದೆ. ರಾಮದುರ್ಗ ತಾಲೂಕಿನ ಪ್ರಸಿದ್ಧ ಹಣಮಂತನ ದೇವಸ್ಥಾನವಿರುವ ಸುನ್ನಾಳ ಗ್ರಾಮದ ಜನರೆಲ್ಲರೂ ತಮ್ಮ ಮನೆಗಳನ್ನು ಖಾಲಿ ಮಾಡಿಕೊಂಡು ಸಮೀಪದ ಜನತಾ ಕಾಲನಿಗೆ ಸ್ಥಳಾಂತರಗೊಂಡಿದ್ದಾರೆ.ಕಳೆದ ವರ್ಷವೂ ಇದೇ ರೀತಿ ಸ್ಥಳಾಂತರಗೊಂಡಿದ್ದರು.
ಸುನ್ನಾಳ ರಾಮದುರ್ಗ ನಡುವಣ ರಸ್ತೆ ಸಂಚಾರ ಬಂದ್ ಆಗಿದೆ.ರಾಮದುರ್ಗ ಸುರೇಬಾನ ಮಧ್ಯದ ಹಳೆಯ ಸೇತುವೆ ಸಹ ಸಂಪರ್ಕ ಕಡಿದುಕೊಂಡಿದೆ.ರಾಮದುರ್ಗಕ್ಕೆ ಹೋಗುವವರು ಯರಗಟ್ಟಿ,ಲೋಕಾಪುರ ಮಾರ್ಗವಾಗಿ ಮುದ್ನೂರು,ಹಲಗತ್ತಿ ಮೂಲಕ ಸುತ್ತು ಬಳಸಿಯೇ ತಲುಪಬೇಕು. ಮಲಪ್ರಭೆಯ ದಡದಲ್ಲಿರುವ ಗೊಣಗನೂರು,ಘಟಕನೂರು,ಹಲಗತ್ತಿ,ಕಿಲಬನೂರು,ಹಂಪಿಹೊಳಿ,ದೊಡಮಂಗಡಿ,ರಂಕಲಕೊಪ್ಪ ಮುಂತಾದ ಗ್ರಾಮಗಳ ಜನರು ಪ್ರವಾಹ ಭೀತಿಯನ್ನು ಎದುರಿಸುತ್ತಿದ್ದಾರೆ.
ಕಳೆದ ವರ್ಷದ ಪ್ರವಾಹದ ಕಾಲಕ್ಕೆ ಸುನ್ನಾಳದ ಗ್ರಾಮಸ್ಥರನ್ನು ಹೆಲಿಕಾಪ್ಟರ್ ಬಳಸಿ ನೆರೆಯಿಂದ ಪಾರು ಮಾಡಲಾಗಿತ್ತು.
ಜಿಲ್ಲೆಯ ಹುಕ್ಕೇರಿ ಬಳಿಯ ಹಿಡ್ಕಲ್ ಡ್ಯಾಮಿನಲ್ಲಿ ಸೋಮವಾರ ಸಂಜೆಯವರೆಗೆ 50 ಟಿ ಎಮ್ ಸಿ ನೀರು ನಿಂತಿದೆ.ಒಟ್ಟು ಸಾಮರ್ಥ್ಯ 51 ಟಿ ಎಮ್ ಸಿ.ಒಳ ಹರಿವು ಮತ್ತು ಹೊರಹರಿವು 40 ಸಾವಿರ ಕ್ಯೂಸೆಕ್ಸ .
105 ಟಿ ಎಮ್ ಸಿ ಸಾಮರ್ಥ್ಯದ ಮಹಾರಾಷ್ಟ್ರದ ಸಾತಾರಾ ಬಳಿಯ ಕೊಯ್ನಾ ಡ್ಯಾಮಿನಲ್ಲಿ ಸೋಮವಾರ ಸಂಜೆ 4 ಗಂಟೆಯವರೆಗೆ 92.70 ಟಿ ಎಮ್ ಸಿ
ಸಂಗ್ರಹವಾಗಿದೆ.ಸದ್ಯ88.08 ಪ್ರತಿಶತದಷ್ಟು ತುಂಬಿದ್ದು ಪೂರ್ತಿ ತುಂಬಲು ಇನ್ನೂ 12 ಟಿ ಎಮ್ ಸಿ ಯಷ್ಟು ಬಾಕಿಯಿದೆ.ಒಳಹರಿವು ಮತ್ತು ಹೊರಹರಿವು 56431 ಕ್ಯೂಸೆಕ್ಸ ಇದೆ. ಸೋಮವಾರ ಮುಂಜಾನೆ ಪುಣೆಯ ಕೃಷ್ಣಾ ಕೊಳ್ಳದ ಅಭಿವೃದ್ಧಿ ಮಹಾಮಂಡಳದ ಅಧೀಕ್ಷಕ ಅಭಿಯಂತರಾದ ಶ್ರೀ ಹಣಮಂತ ಗುಣಾಲೆ ಅವರು ಹೇಳಿಕೆಯೊಂದನ್ನು ನೀಡಿ ಕೊಯ್ನಾ ನೀರು ಬಿಡುಗಡೆ ಮಾಡುವ ಸಂಬಂಧದ ಯಾವದೇ ವದಂತಿಗಳನ್ನು ನದಿ ತೀರದ ಜನರು ನಂಬಬಾರದು.ಸೋಮವಾರ ಮಧ್ಯಾನ್ಹ 2 ಗಂಟೆಯಿಂದ ನೀರಿನ ಮಟ್ಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿದೆ.ಸದ್ಯ ಹೆಚ್ಚಿಗೆ ನೀರು ಬಿಡುಗಡೆ ಮಾಡುವದಿಲ್ಲ.ಬಿಡುವದಾದರೆ ಮೊದಲೇ ಮುನ್ಸೂಚನೆ ನೀಡಲಾಗುವದು ಎಂದು ತಿಳಿಸಿದ್ದಾರೆ.
ಇನ್ನು ಆಲಮಟ್ಟಿ ಡ್ಯಾಂ ತುಂಬಲು 16 ಟಿ ಎಮ್ ಸಿ ನೀರು ಬೇಕು.ಒಳ ಹರಿವು 1,37,291 ಕ್ಯೂಸೆಕ್ಸ ಇದ್ದು ಹೊರಹರಿವು
2,50,000 ಕ್ಯೂಸೆಕ್ಸ ತಲುಪಿದೆ.519.64 ಮೀಟರ್ ಎತ್ತರದ ಡ್ಯಾಮಿನಲ್ಲಿ ಸದ್ಯ 518.65 ಅಡಿಯಷ್ಟು ನೀರಿದೆ.
ಕೊಯ್ನಾದಿಂದ ಶನಿವಾರ,ರವಿವಾರ ಬಿಡುಗಡೆಯಾಗಿರುವ ನೀರು ಮಂಗಳವಾರ,ಬುಧವಾರ ರಾಜಾಪುರ ಬ್ಯಾರೇಜ್ ಬಳಿ ಕರ್ನಾಟಕವನ್ನು ಪ್ರವೇಶಿಸಲಿದ್ದು ಸದ್ಯದ ಒಳಹರಿವು ಎಷ್ಟು ಹೆಚ್ಚಲಿದೆಯೆಂಬುದು ನಿಖರವಾಗಿ
ಗೊತ್ತಾಗಲಿದೆ. ಅಗಷ್ಟ 21 ರವರೆಗೂ ಮಹಾರಾಷ್ಟ್ರದ ಸಾಂಗ್ಲಿ,ಸಾತಾರಾ ಹಾಗೂ ಕೊಲ್ಹಾಪುರ ಪ್ರದೇಶದಲ್ಲಿ ಭಾರೀ ಮಳೆಯ ಸೂಚನೆಗಳಿವೆ.