ಬೆಂಗಳೂರು:- ಸಿಎಎ ಮತ್ತು ಎನ್ಆರ್ಸಿ ಪ್ರತಿಭಟನೆ ವೇಳೆ ಸಾಕಷ್ಟು ಶ್ರಮ ವಹಿಸಿದ್ದೀರಿ ಎಂದು ಬೆಂಗಳೂರು ನಗರ ನಿರ್ಗಮಿತ ಪೊಲೀಸ್ ಕಮೀಷನ್ ಭಾಸ್ಕರ್ ರಾವ್ ಅವರು ಹೇಳಿದರು. ನಗರದಲ್ಲಿ ವೈರ್ಲೆಸ್ ಮೂಲಕ ಪೊಲೀಸ್ ಸಿಬ್ಬಂದಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದೀರಿ ನಂತರ ಕೊರೊನಾ ವೇಳೆ ಹಗಲು ರಾತ್ರಿ ಕರ್ತವ್ಯ ನಿರ್ವಹಿಸಿ ಕೊರೊನಾ ನಿಯಂತ್ರಣಕ್ಕೆ ಶ್ರಮ ಹಾಕಿದ್ದೀರಿ. ಸೋಂಕು ತಗುಲಿದ ವೇಳೆ ನೀವು ದಕ್ಷವಾಗಿ ಕೆಲಸ ಮಾಡಿದ್ದೀರಿ. ಅಸ್ಪತ್ರೆಯಲ್ಲಿ ಇರುವ ಸಿಬ್ಬಂದಿ ಆದಷ್ಟು ಬೇಗ ಗುಣಮುಖರಾಗಿ ಹೊರಗೆ ಬನ್ನಿ ಎಂದು ಅವರು ಹಾರೈಸಿದರು. ನಿಮ್ಮ ಮಕ್ಕಳು ಮತ್ತು ಕುಟುಂಬಕ್ಕೆ ಆದ್ಯತೆ ಕೊಡಿ, ಎಲ್ಲಾ ಪೊಲೀಸ್ ಸಿಬ್ಬಂದಿ ಆರೋಗ್ಯ ಕಾಪಾಡಿಕೊಳ್ಳಿ. ಒಂದು ವರ್ಷ ಬೆಂಗಳೂರು ಕಮೀಷನರ್ ಆಗಿ ಕೆಲಸ ಮಾಡಿದ್ದು, ತೃಪ್ತಿಕರವಾಗಿದೆ. ನಿಮ್ಮೆಲ್ಲರ ಸಹಕಾರ ತುಂಬಾ ಖುಷಿ ನೀಡಿದೆ. ಬೆಂಗಳೂರು ಪೊಲೀಸ್ ಇಲಾಖೆ ಹೆಸರು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿ ಎಂದು ಅವರು ಕಿವಿಮಾತು ಹೇಳಿದರು. ಇದೇ ವೇಳೆ ವೈರ್ಲೆಸ್ನಲ್ಲಿ ಪೊಲೀಸ್ ಆಯುಕ್ತರಿಗೆ ಧನ್ಯವಾದ ಹೇಳಿದ ಪೊಲೀಸ್ ಸಿಬ್ಬಂದಿಗಳು, ನಿಮ್ಮ ಜೊತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ನೀವು ಸಿಬ್ಬಂದಿ ಆರೋಗ್ಯದ ಬಗ್ಗೆ ಇಟ್ಟ ಕಾಳಜಿ, ಹಲವರ ಜೀವ ಉಳಿಸಿದ್ದೀರಿ ಎಂದು ಧನ್ಯತೆಯ ಭಾವವನ್ನು ನಿರ್ಗಮಿತ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರಿಗೆ ಅರ್ಪಿಸಿದರು.