ಮಂಗಳೂರು:- ಆಘಾತಕಾರಿ ಘಟನೆಯೊಂದರಲ್ಲಿ ಅಪರಿಚಿತ ಹಲ್ಲೆಕೋರರು ಗುಂಡು ಹಾರಿಸಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮಂಗಳೂರಿನ ಅಥೇನಾ ಹಾಸ್ಪಿಟಲ್ ಸಮೀಪದ ಫಳ್ನೀರ್ ನಲ್ಲಿರುವ ಎಂಎಫ್‌ಸಿ ಹೋಟೆಲ್‌ನಲ್ಲಿ ನಡೆದಿದೆ. ಗುಂಡಿನ ದಾಳಿಯಲ್ಲಿ ಹೋಟೆಲ್ ಸಿಬ್ಬಂದಿ ಸಾಹಿಲ್ ಹಾಗೂ ಸುರತ್ಕಲ್ ನಿವಾಸಿ ಸೈಫ್ ಗಾಯಗೊಂಡಿದ್ದಾರೆ.
ದಾಳಿಕೋರರು ಹೋಟೆಲ್ ಪೀಠೋಪಕರಣಗಳನ್ನು ಸಹ ನಾಶಪಡಿಸಿದ್ದು ಮತ್ತಿಬ್ಬರು ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದ್ದಾರೆ.
ಈ ಘಟನೆ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಘಟನೆಯಲ್ಲಿ ಭಾಗಿಯಾದವರೆನ್ನಲಾದ ಇಬ್ಬರನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ.
ಹೋಟೆಲ್ ಗೆ ಆಗಮಿಸಿದ ಪರಿಚಿತರು ಸಮೋಸಾ ಕೇಳಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಹಾಗೂ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹೋಟೆಲ್ ನಿಂದ ಹೊರಬಂದ ವ್ಯಕ್ತಿಗಳು ತಮ್ಮ ಬಳಿ ಇದ್ದ ಪಿಸ್ತೂಲ್ ನಿಂದ ಶೂಟ್ ಮಾಡಿದ್ದಾರೆ. ಈ ಘಟನೆ ಹಳೆಯ ವೈಷಮ್ಯ ಅಥವಾ ಡ್ರಗ್ಸ್ ಪೀಡಿತರಿಂದ ಇರಬಹುದೆಂದು ಅಂದಾಜಿಸಲಾಗಿದೆ. ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.