ಬಳ್ಳಾರಿ : ಪೊಲೀಸರ ತ್ಯಾಗ, ಸೇವಾ ಮನೋಭಾವ ಶ್ರೇಷ್ಠವಾದುದು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಕುಟುಂಬ, ಮಕ್ಕಳನ್ನದೇ ಜನರ ಸೇವೆಗಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಇಂತಹ ತ್ಯಾಗ ಮನೋಭಾವ, ಸೇವೆ ಎಲ್ಲರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಕೃಷ್ಣ ಬಿ.ಅಸೋಡೆ ಅವರು ಹೇಳಿದರು.
ಪೊಲೀಸ್ ಹುತಾತ್ಮರ ದಿನಾಚರಣೆ ನಿಮಿತ್ತ ಬಳ್ಳಾರಿ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಡಿಎಆರ್ ಮೈದಾನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರಾದ ಪೊಲೀಸರಿಗೆ ಪುಷ್ಪಗುಚ್ಛ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಪೊಲೀಸ್ ಇಲಾಖೆ ಸಿಬ್ಬಂದಿ ಸಮಯದ ನಿಗದಿ ಇಲ್ಲದಂತೆ ಕೆಲಸ ಮಾಡುತ್ತಾರೆ. ನ್ಯಾಯಾಲಯದಲ್ಲಿ ನಾವು ಹೊರೆ ಇರುವುದನ್ನು ಪಾಲಿಸುವುದು ಪೊಲೀಸರು ಎಂದರು.
ಪೊಲೀಸರೂ ಕೂಡ ನ್ಯಾಯಾಧೀಶರೇ ಎಂದು ಹೇಳಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಅಸೋಡೆ ಅವರು ಜನರಿಗೆ ತಮಗೆ ಸಮಸ್ಯೆಯಾದರೇ ಮೊದಲು ಪೊಲೀಸರನ್ನೇ ನೆನಪಿಸಿಕೊಂಡು ಅವರ ಹತ್ತಿರ ಬರುತ್ತಾರೆ ಎಂದರು. ಜನಸಾಮಾನ್ಯರ ಆಸ್ತಿ ಪಾಸ್ತಿ ಸುಭದ್ರವಾಗಿರಲು ಕಾರಣ ಪೊಲೀಸರು. ಜನಸಾಮಾನ್ಯರೂ ಕೂಡ ಪೊಲೀಸರಿಗೆ ಗೌರವಿಸಿ, ಅಗತ್ಯ ಸೇವೆಗಳನ್ನು ಪಡೆದುಕೊಳ್ಳಬೇಕು ಎಂದರು. ಕುಖ್ಯಾತರನ್ನು ಬಂಧಿಸಲು ಬಹಳಷ್ಟು ಬಾರಿ ಪ್ರಾಣ ಕಳೆದುಕೊಂಡ ಪ್ರಸಂಗಗಳು ನಡೆದಿವೆ ಎಂಬುದನ್ನು ಪ್ರಸ್ತಾಪಿಸಿದ ನ್ಯಾಯಾಧೀಶರು ಪೊಲೀಸರ ತ್ಯಾಗ ಮತ್ತು ಬಲಿದಾನಗಳು ಎಂದಿಗೂ ವ್ಯರ್ಥವಾಗಬಾರದು. ಹುತಾತ್ಮರಿಗೆ ಸರಿಯಾದ ಪರಿಹಾರ ನೀಡಿ, ಅವರ ಕುಟುಂಬಕ್ಕೆ ನೆರವಾಗಬೇಕು. ಹಿರಿಯ ಅಧಿಕಾರಿಗಳು ಹುತಾತ್ಮ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಕ್ರಮವಹಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ ಅವರು ಮಾತನಾಡಿ,ಭಾರತದಲ್ಲಿ ಈ ವರ್ಷ 264 ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿಯೇ ಮರಣಹೊಂದಿದ್ದು,ಅದರಲ್ಲಿ ಕರ್ನಾಟಕದ 17ಜನರು ಆಗಿದ್ದಾರೆ ಎಂದರು. ಕೋವಿಡ್ ಎಂಬ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೋವಿಡ್ ವಾರಿಯರ್ಸ ಆಗಿ ಸೇವೆ ಸಲ್ಲಿಸುತ್ತಾ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಅನೇಕರು ಕರ್ತವ್ಯ ಸಂದರ್ಭದಲ್ಲಿಯೇ ಸೊಂಕು ತಗುಲಿ ಮರಣಹೊಂದಿದ್ದಾರೆ. ಬಳ್ಳಾರಿಯಲ್ಲಿಯೂ ಸಹ 9 ಜನ ಪೊಲೀಸ್ ಸಿಬ್ಬಂದಿ ಮರಣಹೊಂದಿದ್ದಾರೆ ಎಂದರು.
ಹುತಾತ್ಮರಾದ ಪೊಲೀಸರ ಹೆಸರುಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಹುತಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿಗಳು,ಸಿಪಿಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News