Breaking News

ಸಂಸದ ಕಟೀಲ್ ಹೇಳಿಕೆಗೆ ಬಂಜಾರ ಸಮುದಾಯ ಖಂಡನೆ.

ಶಿವಮೊಗ್ಗ:- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರುವುದಾಗಿ ನೀಡಿರುವ ಹೇಳಿಕೆಯನ್ನು ಬಂಜಾರ ವಿದ್ಯಾರ್ಥಿ ಸಂಘಟನೆ ಮತ್ತು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ.ಬಿ.ಗಿರೀಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿರಾ ಉಪಚುನಾವಣೆಯ ಮಾದಿಗ ಸಮುದಾಯದ ರ್ಯಾಲಿಯಲ್ಲಿ ಕಟೀಲ್ ಅವರು ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತಂದೇ ತರುತ್ತೇವೆ ಎಂದು ಆಮಿಷವೊಡ್ಡಿದ್ದಾರೆ. ಆ ಮೂಲಕ ಅವರು ಓಟು ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇವರ ಈ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದರು.

ನ್ಯಾ.ಸದಾಶಿವ ವರದಿಗೆ ಸಂಬಂಧಿಸಿದಂತೆ ಇನ್ನೂ ವಾದ ವಿವಾದಗಳು ನಡೆಯುತ್ತಿವೆ. ಬಹಿರಂಗ ಚರ್ಚೆಯು ಆಗಿಲ್ಲ ಮತ್ತು ಕಟೀಲ್ ಅವರಿಗೆ ಈ ವರದಿಯ ಬಗ್ಗೆ ಯಾವ ತಿಳುವಳಿಕೆಯೂ ಇಲ್ಲ ಹೀಗಿದ್ದು, ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಬೆಂಕಿ ಹಚ್ಚುವ ಕೆಲಸವೇ ಆಗಿದೆ. ಅಭಿವೃದ್ಧಿಯ ಹಿನ್ನಲ್ಲೆಯಲ್ಲಿ ಮತ ಕೇಳಬೇಕೆ ಹೊರತು ಮೀಸಲಾತಿಯ ವಿಷಯ ಹಿಡಿದು ಕೇಳಲು ಸರಿಯಲ್ಲ ಏಕೆಂದರೆ ಈ ಬಗ್ಗೆ ಇನ್ನೂ ಯಾವ ತೀರ್ಮಾನವು ಆಗಿಲ್ಲ. ಕೇವಲ ಲಂಬಾಣಿ ಸಮುದಾಯ ಮಾತ್ರವಲ್ಲ. ಕೊರಚ, ಭೋವಿ, ಕೊರಮ ಸಮಾಜದವರು ಕೂಡ ಇದನ್ನು ಖಂಡಿಸುತ್ತಾರೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಳೀನ್‍ಕುಮಾರ್ ಕಟೀಲ್ ಅವರನ್ನು ಕರೆದು ಕಿವಿಹಿಂಡಿ ಬುದ್ದಿ ಹೇಳಬೇಕು. ಕಟೀಲ್ ಅವರು ತಮ್ಮ ಹೇಳಿಕೆ ವಾಪಾಸ್ಸು ಪಡೆಯಬೇಕು ಮತ್ತು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನ.2ರ ಸೋಮವಾರದಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಶಿರಾ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸುವಂತೆ 4 ಸಮುದಾಯದವರು ಕರೆ ನೀಡಲಿದ್ದಾರೆ ಎಂದರು.

ನ.2ರಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದಿಂದ ಪ್ರಾರಂಭವಾದ ಈ ಪ್ರತಿಭಟನೆ ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಉಷಾನಾಯ್ಕ್, ಉಮಾಮಹೇಶ್ವರ್ ನಾಯ್ಕ್, ಜಯಾನಾಯ್ಕ್, ಬಾಲಾಜಿ ನಾಯ್ಕ್, ಪ್ರವೀಣ್‍ಕುಮಾರ್, ಕೃಷ್ಣನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.  ವರದಿ: ರಮೇಶ ಚವ್ಹಾನ

About vijay_shankar

Check Also

BJP ತೋರೆದು ಕಾಂಗ್ರೆಸ್ ಕೈ ಹಿಡಿದ ರಂಗಪ್ಪ ಸುರಪೂರ

ಇಲಕಲ್ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ:- ಕೆಪಿಸಿಸಿ ಸದಸ್ಯರಾದ ಶಾಂತಕುಮಾರ್ ಸುರಪುರ ಅವರ ನೇತೃತ್ವದಲ್ಲಿ ಯುವ ಮುಖಂಡರಾದ ರಂಗಪ್ಪ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.