“ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ನಿರ್ಮಾಣ ಮಾಡಿದ್ದ ಕಿರುತೆರೆ ನಿರ್ಮಾಪಕಿ ಶೈಲಾಜಾ ನಾಗ್, ಶಿವಕುಮಾರ್ ಹಾಗೂ ಒಗ್ಗರಣೆ ಡಬ್ಬಿ ಮುರುಳಿ ಅವರನ್ನು ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ”
ಟಿವಿ ಚಾನೆಲ್‌ಗಳು ತಮ್ಮ ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಅಕ್ರಮ ಎಸಗಿರುವ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲಿಯೂ ಈ ಜಾಲ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಟಿಆರ್‌ಪಿಯನ್ನು ತಿರುಚುತ್ತಿದ್ದ ನಾಲ್ಕು ಜನಾರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ ಈ ಮಾಹಿತಿಯನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಹಾಗಾಗಿ ಕರ್ನಾಟಕದ ಅರ್ನಾಬ್ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಹಗರಣದ ಪ್ರಮುಖ ಆರೋಪಿ ಎನ್ನಲಾಗಿರುವ ಲಕ್ಷ್ಮಿ ಎಂಬುವರು ನಾಪತ್ತೆ ಆಗಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರ ನಿರ್ಮಾಣ ಮಾಡಿದ್ದ ಕಿರುತೆರೆ ನಿರ್ಮಾಪಕಿ ಶೈಲಾಜಾ ನಾಗ್, ಶಿವಕುಮಾರ್ ಹಾಗೂ ಒಗ್ಗರಣೆ ಡಬ್ಬಿ ಮುರುಳಿ ಅವರನ್ನು ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕಪ್ಪು ಪಟ್ಟಿಗೆ ಸೇರಿಸಲಾಗಿದೆ” ಎಂದು ‘ಈ-ಪತ್ರಿಕೆ’ ವರದಿ ಮಾಡಿದೆ.
ಟಿಆರ್‌ಪಿ ಹಗರಣದ ಕಾರಣಕ್ಕೆ ಬಾರ್ಕ್ (BAARC) ಸಂಸ್ಥೆ ದೇಶಾದ್ಯಂತ ಸುದ್ದಿ ವಾಹಿನಿಗಳ ರೇಟಿಂಗನ್ನು ಕಳೆದ ಕೆಲವು ದಿನಗಳಿಂದ ಸ್ಥಗಿತಗೊಳಿಸಿತ್ತು. ಅಷ್ಟೇ ಅಲ್ಲದೇ ಸ್ವತಃ ಸಂಸ್ಥೆಯ ಹಿರಿಯ ಅಧಿಕಾರಗಳೇ ಈ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದರು.
ಈ ಹಗರಣದ ಬಳಿಕ ಕನ್ನಡ ಚಾನಲ್‍ಗಳ ಟಿಆರ್‌ಪಿ ರೇಟಿಂಗನ್ನು ತಾತ್ಕಾಲಿಕವಾಗಿ ಮುಂಬೈನ ಮಾದರಿಯಲ್ಲಿ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಬಾರ್ಕ್ ಸಂಸ್ಥೆಯ ದೂರಿನ ಮೇಲೆ ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು, ಹಲವರನ್ನು ಬಂಧಿಸಿದ್ದಾರೆ.
ರಾಜ್ಯದಲ್ಲಿ ನಂ.1 ಚಾನಲ್ ಎಂಬ ಹಣೆಪಟ್ಟಿಕಟ್ಟಿಕೊಂಡಿರುವ ವಾಹಿನಿಗಳ ಬಂಡವಾಳವನ್ನು ಸಿಸಿಬಿ ಪೊಲೀಸರು ಬಯಲು ಮಾಡಲು ಮುಂದಾಗಿದ್ದು, ಅವರು ನೀಡಿದ ಮಾಹಿತಿ ಮೇರೆಗೆ ಕನ್ನಡದ ನಂ.1 ವಾಹಿನಿಯ ಬ್ಯುಜಿನೆಸ್ ಹೆಡ್ ಹಾಗೂ ನಂ.2 ವಾಹಿನಿಯ ಫಿಕ್ಷನ್ ಹೆಡ್ ಅವರನ್ನು ಸಿಸಿಬಿ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ. ಸಿಸಿಬಿ ಈವರೆಗೂ ಪಟ್ಟಿ ಮಾಡಿರುವ ಪ್ರಕಾರ 8 ಮಂದಿ ಈ ಹಗರಣದಲ್ಲಿ ಪ್ರಮುಖರಾಗಿದ್ದಾರೆ. ಇವರುಗಳನ್ನು ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.
ಟಿಆರ್‌ಪಿ ಟ್ಯಾಂಪರಿಂಗ್‍ಗೆ ಸಂಬಂಧಪಟ್ಟಂತೆ ಆರು ಮಂದಿ ನಿರ್ಮಾಪಕರಿಗೆ ವಿವಿಧ ವಾಹಿನಿಗಳು ನಿಷೇಧ ಹೇರುವ ಸಾಧ್ಯತೆ ಇದೆ. ಟಿಆರ್‌ಪಿ ಹಗರಣದ ಬೆನ್ನು ಹತ್ತಿರುವ ಸಿಸಿಬಿ ಪೊಲೀಸರು ತನಿಖೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ಶೀಘ್ರವೇ ಎಲ್ಲಾ ಮಾಹಿತಿಯನ್ನು ಪ್ರಕಟಿಸಲಿದ್ದಾರೆ ಎನ್ನಲಾಗಿದೆ.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಹಿಂದಿಯ ರಿಪಬ್ಲಿಕ್ ಟಿವಿ ಸೇರಿದಂತೆ 3 ಚಾನೆಲ್‌ಗಳ ಹೆಸರನ್ನು ಮುಂಬೈ ಪೊಲೀಸರು ಉಲ್ಲೇಖಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಾರ್ಕ್‌ನ ಮಾಜಿ ಸಿಇಒಗಳನ್ನು ಬಂಧಿಸಲಾಗಿದೆ. ಶುಕ್ರವಾರ ಬಾರ್ಕ್‌ನ ಮಾಜಿ ಮುಖ್ಯಸ್ಥ ಪಾರ್ಥೋ ದಾಸ್‌ಗುಪ್ತ ಮತ್ತು ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯ ನಡುವೆ ನಡೆದಿರುವ 500 ಪುಟಗಳ ವಾಟ್ಸಾಪ್ ಸಂದೇಶಗಳನ್ನು ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದರು. ಇದು ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News