ಭೋಪಾಲ್: ದುಷ್ಕರ್ಮಿಯೊಬ್ಬ ಆಸ್ಪತ್ರೆಯೊಳಗೆ ಬಂದು ಅಲ್ಲಿ ದಾಖಲಾಗಿದ್ದ ರೋಗಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಲು ಪ್ರಯತ್ನಿಸಿರುವ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯವನ್ನಾಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಸಾಗರ ಜಿಲ್ಲಾಸ್ಪತ್ರೆಯಲ್ಲಿ ಇಂತದ್ದೊಂದು ಘಟನೆ ಗುರುವಾರದಂದು ನಡೆದಿದೆ. ದಾಮೋದರ್ ಕೋರಿ ಹೆಸರಿನ ವ್ಯಕ್ತಿಗೆ ಮಿಲನ್ ರಾಜಕ್ ಹೆಸರಿನ ವ್ಯಕ್ತಿ ಈ ಹಿಂದೆ ಹೊಡೆದು ಗಾಯಗೊಳಿಸಿದ್ದ. ಆ ಹಿನ್ನೆಲೆಯಲ್ಲಿ ಆಸ್ಪತ್ರೆ ಸೇರಿದ್ದ ದಾಮೋದರ್ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಆಸ್ಪತ್ರೆಗೂ ಬಂದ ಮಿಲನ್, ದಾಮೋದರ್ ಬಳಿ ಬಂದು ಆತನಿಗೆ ಬೆಂಕಿ ಹಚ್ಚಿದ್ದಾನೆ. ಹೊತ್ತಿ ಉರಿಯುತ್ತಿದ್ದ ಬೆಂಕಿಯೊಂದಿಗೆ ಆತ ಆಸ್ಪತ್ರೆ ದ್ವಾರದತ್ತ ಓಡಿಬಂದ್ದಿದ್ದಾನೆ. ಸದ್ಯ ಆತನನ್ನು ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಿಲನ್ ಬೆಂಕಿ ಹಚ್ಚಲು ಪೆಟ್ರೋಲ್ ಬಳಸಿದ್ದಾನೆ. ಆತ ಆಸ್ಪತ್ರೆಯಲ್ಲಿ ಲೈಟರ್ ಹಿಡಿದು ಓಡಾಡುತ್ತಿರುವುದು, ರೋಗಿಯ ಬಳಿ ಹೋಗಿ ಬೆಂಕಿ ಹಚ್ಚಿರುವುದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿಯ ವಿರುದ್ಧ ಗೋಪಾಲ್ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ ಎಂದು ಸಾಗರ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಕುಶ್ವಾ ತಿಳಿಸಿದ್ದಾರೆ.