ಶಿವಮೊಗ್ಗ:- ಭದ್ರಾವತಿಯ ಕಾಗದ ಕಾರ್ಖಾನೆ (ಎಂಪಿಎಂ) ಗೆ ಸೇರಿದ್ದ ಸುಮಾರು 33 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯ ಗುತ್ತಿಗೆ ಅವಧಿ ಮುಗಿದಿದ್ದು, ಸರ್ಕಾರ ತಕ್ಷಣವೇ ಅದನ್ನು ವಾಪಾಸ್ ಪಡೆಯಬೇಕು ಎಂದು ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.
ಪ್ರೆಸ್‍ಟ್ರಸ್ಟ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಪ್ರಗತಿಪರ ಮುಖಂಡರು, ಹಲವು ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಿದರು. ಈಗ ಇರುವ ಭೂಮಿಯನ್ನು ಭೂರಹಿತರಿಗೆ ನೀಡಿ ಅಲ್ಲಿ ಕಾಡು ಬೆಳೆಸಲು ಅನುಮತಿ ನೀಡಬೇಕು ಮತ್ತು ಅಲ್ಲಿನ ಉತ್ಪನ್ನಗಳ ಲಾಭವನ್ನು ಆ ರೈತರಿಗೆ ನೀಡಬೇಕು.ಜಿ.ಪಂ., ತಾ.ಪಂ., ಗ್ರಾ.ಪಂ., ಗಳಲ್ಲಿ ಈ ನೆಡುತೋಪು ವಿರುದ್ದ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಬೇಕು. ನ್ಯಾಯಾಲಯದಲ್ಲಿ ದಾವೆ ಹೂಡಲು ಸಿದ್ದರಾಗಬೇಕು. ಕಾಡು ಮತ್ತು ಜೀವವೈವಿಧ್ಯ ಸೇವೆಗಳಿಗೆ ಬೆಲೆ ಕಟ್ಟಬೇಕು. ನಮ್ಮಭೂಮಿ ನಮ್ಮ ಹಕ್ಕು ಸ್ಥಾಪಿತವಾಗಬೇಕು. ಭೂಮಿ ಒಂದು ಭಾವನಾತ್ಮಕ ವಿಷಯ. ನಮ್ಮ ಭೂಮಿಯಲ್ಲಿ ಯಾರಿಗೂ ದಂಧೆ ಮಾಡಲು ಅವಕಾಶವಿಲ್ಲ. ಇವು ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳಾಗಿವೆ. ಎಂಪಿಎಂ ಕಾರ್ಖಾನೆ ನಡೆಯುತ್ತಿರುವಾಗ ಸರ್ಕಾರ ಪಶ್ಚಿಮಘಟ್ಟದ ಹಲವು ಕಡೆ ಸುಮಾರು 33 ಸಾವಿರಕ್ಕೂ ಹೆಚ್ಚು ಭೂಮಿಯನ್ನ 40 ವರ್ಷಗಳ ಅವಧಿಗೆ ನೀಡಿತ್ತು. ಆದರೆ ಈ ಅವಧಿ ಈಗಾಗಲೇ ಮುಗಿದಿದೆ ಮತ್ತು ಕಾರ್ಖಾನೆಯೂ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವುದೇ ಕಾರಣಕ್ಕೂ ಇದನ್ನು ಮುಂದುವರೆಸದೇ ಮತ್ತು ಅಲ್ಲಿ ನೀಲಗಿರಿ ತೋಪು ಬೆಳೆಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ತಿಳಿಸಿದರು.

ನೀಲಗಿರಿ ಒಂದು ಸಸ್ಯವೇ ಅಲ್ಲ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸರಿಯಾಗಿ ಆಮ್ಲಜನಕವನ್ನು ಉತ್ಪಾದನೆ ಮಾಡಲು ಆಗದೇ ಇರುವ ಇಂತಹ ಅಕೇಶಿಯ, ನೀಲಗಿರಿಯಿಂದ ಇಡೀ ಪರಿಸವೇ ವಿನಾಶದತ್ತ ಸಾಗುತ್ತದೆ. ಕಾಡು ನಾಶವಾಗುತ್ತಿವೆ, ಜರಿ. ತೊರೆಗಳೇ ಇಲ್ಲವಾಗುತ್ತಿದೆ. ಈ ಸಸ್ಯಗಳ ವಿಷದ ಮತ್ತು ಬಿಸಿ ಗಾಳಿಯಿಂದ ನೂರಾರು ಪಕ್ಷಿಗಳು ಇಲ್ಲವಾಗಿವೆ. ಹಣ್ಣುಗಳ ಮರಗಳೂ ಬೆಳೆಯುತ್ತಿಲ್ಲ ಎಂದು ಪ್ರಗತಿಪರರು ದೂರಿದರು. ಸರ್ಕಾರ ತಕ್ಷಣವೇ ಈ ನೆಡುತೋಪನ್ನು ವಶಪಡಿಸಿಕೊಂಡು ಇಲ್ಲಿ ಸ್ವಾಭಾವಿಕ ಅರಣ್ಯವನ್ನು ಬೆಳೆಸಬೇಕು. ಪರಿಸರ ಉಳಿಸಬೇಕು, ಮನುಷ್ಯನ ದುರಾಸೆಗೆ ಮತ್ತು ಅಭಿವೃದ್ದಿಯ ತಾಕಲಾಟದಲ್ಲಿ ಇಡೀ ಭೂಮಿಯೇ ನಾಶವಾಗುತ್ತಿದೆ. ಅದರಲ್ಲೂ ಗಣಿಗಾರಿಕೆ ಮತ್ತು ನಗರೀಕರಣ ವಿಸ್ತರಣೆಯಿಂದ ಕೃಷಿ ಭೂಮಿಯೇ ಇಲ್ಲವಾಗುತ್ತಿದೆ. ಹೀಗಾದರೆ ಮಾನವ ನಾಶವಾದಂತೆ ಸರಿ ಎಂದು ಹೇಳಿದರು.
ಸಭೆಯಲ್ಲಿ ಒಕ್ಕೂಟದ ಮುಖಂಡರಾದ ಕೆ.ಪಿ.ಶ್ರೀಪಾಲ್, ಕೆ.ಟಿ.ಗಂಗಾಧರ್, ಚಾರ್ವಕ ರಾಘು, ಎಂ.ಗುರುಮೂರ್ತಿ, ಅಖಿಲೇಶ್ ಚಿಪ್ಪಳಿ, ಸುರೇಶ್, ಡಿ.ಮಂಜುನಾಥ್, ಕೃಷ್ಣಪ್ಪ, ಶಿವಮೂರ್ತಿ, ಅಕ್ಷತಾ ಸೇರಿದಂತೆ ಹಲವರಿದ್ದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News