ಕಮತಗಿ: ಪಟ್ಟಣದ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಗಿರಿಮಠದ ಜಾತ್ರಾಮಹೋತ್ಸವ ಅಗಷ್ಟ 23 ರಂದು ನಡೆಯಬೇಕಿತ್ತು ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಜಾತ್ರೆ ಹಾಗೂ ರಥೋತ್ಸವವನ್ನು ರದ್ದುಗೊಳಿಸಲಾಗಿದೆ.
ಸ್ಥಳೀಯ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದಲ್ಲಿ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಬುಧವಾರ ನಡೆದ ಜಾತ್ರಾ ಮಹೋತ್ಸವ ಸಮಿತಿಯ ಮುಖಂಡರ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ, ದಿನದಿಂದ ದಿನಕ್ಕೆ ಕೊರಿನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀಮಠದ ಭಕ್ತರ ಆರೋಗ್ಯದ ಹಿತದೃಷ್ಠಿಯಿಂದ ಶ್ರೀ ಹುಚ್ಚೇಶ್ವರ ಸಂಸ್ಥಾನಮಠದ ಗಿರಿಮಠದ ಜಾತ್ರೆ ಹಾಗೂ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಸಂಪ್ರದಾಯದಂತೆ ದಿ.23 ರಂದು ಬೆಳಗಿನ ಜಾವ ಕರ್ತೃಗದ್ದುಗೆಗೆ ವಿಶೇಷ ಅಲಂಕಾರ, ಪೂಜೆ ನಡೆಯಲಿದೆ. ರಥಕ್ಕೆ ಪೂಜೆ ಮಾತ್ರ ನೆರವೇರಿಸಲಾಗುವುದು ಎಂದು ಹೇಳಿದರು.
ಕೋವಿಡ್-19 ಇರುವುದರಿಂದ ಭಕ್ತರು ಬಹಳಷ್ಟು ಸಂಖ್ಯೆಯಲ್ಲಿ ಸೇರಬಾರದು. ಮಾಸ್ಕ ಧರಿಸಿಕೊಂಡು, ಸಾಮಾಜಿಕ ಅಂತರದೊಂದಿಗೆ ದರ್ಶನ ಮಾಡಿಕೊಳ್ಳಬೇಕು. ಬೆಟ್ಟದ ಮೇಲೆ ಇರುವ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗಬಾರದು. ತಮ್ಮ ಮನೆಗಳಲ್ಲಿಯೇ ಶ್ರೀ ಹುಚ್ಚೇಶ್ವರನಿಗೆ ಪೂಜೆ ಸಲ್ಲಿಸಿ, ರಥೋತ್ಸವದ ಸಮಯಕ್ಕೆ ದೀಪವನ್ನು ಬೆಳಗಿಸಿ ಈ ವರ್ಷದ ಜಾತ್ರೆಯನ್ನು ಬೆಳಕಿನೆಡೆಗೆ, ಕೊರೊನಾ ಮುಕ್ತ ಭಾರತದೆಡೆಗೆ ಸಾಗುವ ರೀತಿಯಲ್ಲಿ ನಡೆಸಬೇಕು ಎಂದು ಭಕ್ತರಲ್ಲಿ ಪೂಜ್ಯರು ಸೂಚಿಸಿದ್ದಾರೆ.
ಸಭೆಯಲ್ಲಿ ಬಸವಂತಪ್ಪ ಬೆಲ್ಲದ, ಬಸವರಾಜ ಕುಂಬಳಾವತಿ, ಯಲ್ಲಪ್ಪ ವಡ್ಡರ, ಸಿದ್ದು ಹೊಸಮನಿ, ಶ್ರೀಕಾಂತ ಹಾಸಲಕರ, ಹುಚ್ಚಪ್ಪ ಸಿಂಹಾಸನ, ದೇವಿಪ್ರಸಾದ ನಿಂಬಲಗುಂದಿ, ಚಂದ್ರು ಮಳ್ಳಿ, ಗುರು ಪಾಟೀಲ, ಈರಣ್ಣ ನಾಗಠಾಣ, ಸಿದ್ದಲಿಂಗಯ್ಯ ಕಲ್ಮಠ, ಶ್ರೀಶೈಲ ಲೆಕ್ಕದ, ಮಲ್ಲಿಕಾರ್ಜುನಪ್ಪ ಲಾಯದಗುಂದಿ, ಗಂಗಪ್ಪ ಭೂತಲ, ಅಶೋಕ ಹಾವೇರಿ, ಬಿ.ವಿ.ಬೀರಕಬ್ಬಿ, ಚನ್ನಪ್ಪ ಹಳ್ಳೂರ, ಕಲ್ಲಯ್ಯ ಧಾರವಾಡ, ಸಿದ್ದು ಬೇಲೂರು, ಸಂಗಣ್ಣ ಗುರುವಿನಮಠ,ಅಶೋಕ ಸಿಂಗದ, ಪ್ರಕಾಶ್ ಗುಳೇದಗುಡ್ಡ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವರದಿ: ರಮೇಶ್ ಚವ್ಹಾಣ